ಶಿವಮೊಗ್ಗ: ನನಗೆ ಕೋವಿಡ್ ಪಾಸಿಟಿವ್ ಇದೆ. ಬಿಡಿ ಸರ್ ಮನೆಗೆ ಹೋಗ್ಬೇಕು ಎಂದು ಕೊರೊನಾ ಸೋಂಕಿತನೋರ್ವ ವಾಹನ ತಪಾಸಣೆ ವೇಳೆ ಪೊಲೀಸರ ಬಳಿ ಹೇಳಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ನಗರದ ಯುವಕನೋರ್ವ ತನಗೆ ಕೊರೊನಾ ಪಾಸಿಟಿವ್ ಇದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ವೇಳೆ ಪಾಸಿಟಿವ್ ದೃಢಪಟ್ಟಿದೆ. ಮನೆಯಲ್ಲಿ 14 ದಿನ ಕ್ವಾರಂಟೈನ್ ಇರುವಂತೆ ಹೇಳಿ ರಿಪೋರ್ಟ್ ಕೊಟ್ಟಿದ್ದಾರೆ ಎಂದು ಪೊಲೀಸರಿಗೆ ವರದಿ ತೋರಿಸಿದ್ದಾನೆ. ತಕ್ಷಣ ಪೊಲೀಸರು ಅವನನ್ನು ಮನೆಗೆ ಹೋಗುವಂತೆ ಕಳುಹಿಸಿ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದರು.
ತಬ್ಬಿಬ್ಬಾದ ಪೊಲೀಸರು:
ವೀಕೆಂಡ್ ಕರ್ಫ್ಯೂ ಇರುವ ಕಾರಣ ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಬಂದ ಯುವಕನನ್ನು ಪೊಲೀಸರು ತಡೆದರು. ಆಗ ಆಸ್ಪತ್ರೆಗೆ ಹೋಗಿದ್ದೆ ಎಂದು ಯುವಕ ಹೇಳಿದ್ದಾನೆ. ಅದಕ್ಕೆ ಪೊಲೀಸರು ಯಾಕೆ ಆಸ್ಪತ್ರೆಗೆ ಹೋಗಿದ್ದೆ ಎಂದು ಪ್ರಶ್ನಿಸಿದ್ದಾರೆ. ಆಗ ಕೋವಿಡ್ ತಪಾಸಣೆ ಮಾಡಿಸಲು ಹೋಗಿದ್ದೆ ಸರ್, ಪಾಸಿಟಿವ್ ಬಂದಿದೆ ಮನೆಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ. ಆಗ ಪೊಲೀಸರು ಒಂದು ಕ್ಷಣ ತಬ್ಬಿಬ್ಬಾಗಿ ಪಾಸಿಟಿವ್ ಇರುವ ನೀನು ಯಾಕೇ ಓಡಾಡುತ್ತಿದ್ದಿಯಾ, ಮನೆಗೆ ಹೋಗಿ ಹೋಂ ಕ್ವಾರಂಟೈನ್ ಆಗು ಎಂದು ಕಳಿಸಿದರು.
ವೈದ್ಯರ ನಿರ್ಲಕ್ಷ್ಯವೇ ಕಾರಣನಾ?
ಪಾಸಿಟಿವ್ ಬಂದ ಯುವಕನನ್ನು ಯಾವುದಾದರೂ ಆ್ಯಂಬುಲೆನ್ಸ್ನಲ್ಲಿ ಮನೆಗೆ ಕಳುಹಿಸಿ ಹೋಂ ಕ್ವಾರಂಟೈನ್ ಇರುವಂತೆ ರಿಪೋರ್ಟ್ ನೀಡಿದ ವೈದ್ಯರು ಸೂಚಿಸಬಹುದಿತ್ತು. ಆದರೆ ಒಬ್ಬನನ್ನೇ ಓಡಾಡಲು ಬಿಟ್ಟಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.