ನೆಲಮಂಗಲ: ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಪರಿಹಾರವಾಗಿದೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಮುಂದಿನ 8 ತಿಂಗಳವರೆಗೆ ನೀರಿನ ಅಭಾವವಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ತಿಳಿಸಿದರು.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಹುಚ್ಚೇಗೌಡನಪಾಳ್ಯದಲ್ಲಿ ಮಳೆ ನೀರಿನ ಕೊಯ್ಲು ಹಾಗೂ ತಪೋವನದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಯಲು ಸೀಮೆ ಸೇರಿದಂತೆ ಮಲೆನಾಡ ನಿವಾಸಿಗಳು ಕೂಡಾ ನೀರಿನ ಸಂರಕ್ಷಣೆಗೆ ಮಾಡುವುದು ಅಗತ್ಯ. ಬೇಸಿಗೆಯಲ್ಲಿ ಉಂಟಾದ ನೀರಿನ ಕೊರತೆಯಿಂದ ನಾವೆಲ್ಲ ಅದರ ಮೌಲ್ಯವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಎಲ್ಲಾ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಇದೆ. ಅವುಗಳನ್ನು ಗುರುತಿಸುವ, ಅರಿತುಕೊಳ್ಳುವ ಕಾರ್ಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಗ್ರಾಮ ವಾಸ್ತವ್ಯದ ಮೂಲಕ ಮಾಡಬೇಕು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಸಸಿ ವಿತರಣೆ, ಬೀಜದ ಹುಂಡೆ ನೀಡಲಾಯಿತು. ನೀರಿನ ಸದ್ಬಳಕೆಯಾಗುವ ಮಳೆ ನೀರಿನ ಕೊಯ್ಲು ಯೋಜನೆಗೆ ಜನತೆ ಮನಸೋತರು.