ಬೆಂಗಳೂರು : ಹೆದ್ದಾರಿ ಅಗಲೀಕರಣಕ್ಕಾಗಿ ಕುದೂರು ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಅವರು ಬೆಳೆಸಿದ ಮರಗಳನ್ನು ಕಡಿಯದಂತೆ ಸಂರಕ್ಷಿಸಿ, ಪರ್ಯಾಯ ಮಾರ್ಗ ಮಾಡುವಂತೆ ಡಿಸಿಎಂ ಡಾ.ಜಿ. ಪರಮೇಶ್ವರ್ ಸಿಎಂಗೆ ಪತ್ರ ಬರೆದು, ಸಾಲಮರದ ತಿಮ್ಮಕ್ಕ ಅವರೊಂದಿಗೆ ತೆರಳಿ ಮನವಿ ಪತ್ರ ನೀಡಿದರು.
ಇಂದು ಸದಾಶಿವನಗರ ಕಚೇರಿಗೆ ಆಗಮಿಸಿದ ಸಾಲಮರದ ತಿಮ್ಮಕ್ಕ ಅವರು, ಮರಗಳನ್ನು ಕಡಿಯದಂತೆ ಪರಮೇಶ್ವರ್ ಅವರಿಗೆ ಮನವಿ ಪತ್ರ ನೀಡಿದರು. ಇದಕ್ಕೆ ಸ್ಪಂದಿಸಿದ ಪರಮೇಶ್ವರ್, ತಿಮ್ಮಕ್ಕ ಅವರನ್ನು ಮುಖ್ಯಮಂತ್ರಿಗಳ ಕಚೇರಿಗೆ ಕರೆದೊಯ್ದು ಮನವಿ ಮಾಡಿದರು. ಸಾಲುಮರದ ತಿಮ್ಮಕ್ಕ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮರಗಳನ್ನು ಬೆಳೆಸಿ ಪ್ರಕೃತಿ ರಕ್ಷಿಸುತ್ತಿದ್ದಾರೆ. ಅವರ ಮರಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರಗಳನ್ನು ಕಡಿಯದಂತೆ ನೋಡಿಕೊಂಡು ಪರ್ಯಾಯ ಮಾರ್ಗ ಮಾಡಲಾಗುವುದು ಎಂದು ಪರಮೇಶ್ವರ್ ಭರವಸೆ ನೀಡಿದ್ದಾರೆ.
ಈ ವೇಳೆ ಬಾಗೇಪಲ್ಲಿ-ಹಲಗೂರು ಮಾರ್ಗದಲ್ಲಿ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯಲು ಮುಂದಾಗಿರುವ ಬಗ್ಗೆ ಸಿಎಂ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕುಮಾರಸ್ವಾಮಿ, ರಸ್ತೆ ಬದಿಯ ಮರಗಳನ್ನು ಕಡಿಯದಂತೆ ಸೂಚನೆ ನೀಡಿದರು. ಅಗತ್ಯ ಬಿದ್ದಲ್ಲಿ ರಸ್ತೆಯ ಮಾರ್ಗವನ್ನು ಬದಲಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಗ್ರಾಮದಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಸಾಲು ಮರದ ತಿಮ್ಮಕ್ಕ ಮನವಿ ಸಲ್ಲಿಸಿದರು.