ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕೋವಿಡ್ ಸಮಯದಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಕೈಗಳಿಗೆ ಗ್ಲೌಸ್, ಮಾಸ್ಕ್ ನೀಡಿದ್ದರೂ ಹಲವೆಡೆ ಪೌರಕಾರ್ಮಿಕರು ಧರಿಸಲು ನಿರ್ಲಕ್ಷ್ಯ ವಹಿಸುವ ಹಿನ್ನೆಲೆ, ಕೈಗವಸು, ಮಾಸ್ಕ್ ಧರಿಸುವ ಬಗ್ಗೆ ಮಸ್ಟರಿಂಗ್ ಸೆಂಟರ್‌ಗಳಲ್ಲಿ ಪೌರಕಾರ್ಮಿಕರಿಗೆ ಜನಜಾಗೃತಿ ಮೂಡಿಸಬೇಕಿದೆ. ಇಲ್ಲವಾದಲ್ಲಿ ಹೆಲ್ತ್ ಆಫೀಸರ್ ಗಳು ಎಚ್ಚರಿಕೆ ಮೂಡಿಸಲು ದಂಡ ಹಾಕುವ ಕೆಲಸ ಮಾಡಬೇಕಿದೆ. ಏಜೆನ್ಸಿಗಳು ಕೂಡಾ ಬೇಜವಾಬ್ದಾರಿಯಾಗಿದ್ದರೆ, ಸರ್ಕಾರಕ್ಕೆ ತಿಳಿಸಿ ರದ್ದು ಮಾಡುವ ಕೆಲಸ ಕೂಡಾ ಮಾಡಬಹುದಾಗಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ತಿಳಿಸಿದರು.
ಇನ್ನು ಇಡೀ ರಾಜ್ಯದ್ದೇ ಒಂದು ಪರಿಸ್ಥಿತಿಯಾದ್ರೆ, ನಗರದ್ದೇ ಇನ್ನೊಂದು ಪರಿಸ್ಥಿತಿ ಇದೆ. ಬಿಬಿಎಂಪಿಯಲ್ಲಿ ಕೋವಿಡ್ ಸಮಯದಲ್ಲಿ ಪೌರಕಾರ್ಮಿಕರಿಗೆ ಏನೇನು ಸೌಲಭ್ಯ ಕೊಟ್ಟಿದ್ದಾರೆ ಎಂಬ ಬಗ್ಗೆ ಪರಿಶೀಲಿಸಲಾಗಿದೆ.
ಲಾಕ್ ಡೌನ್ ಸಮಯದಲ್ಲಿ 18 ಸಾವಿರ ಪೌರಕಾರ್ಮಿಕರಿಗೆ ಓಡಾಡಲು ಈಗಾಗಲೇ 60 ಬಸ್ಗಳಿದ್ದು, ಇದನ್ನು ಹೆಚ್ಚಳ ಮಾಡಲು ತಿಳಿಸಲಾಗಿದೆ. ವ್ಯಾಕ್ಸಿನೇಷನ್ ಶೇ70ರಷ್ಟು ಆಗಿದ್ದು, ಇದನ್ನು ಹೆಚ್ಚಳ ಮಾಡಲು ತಿಳಿಸಲಾಗಿದೆ. ಊಟ, ತಿಂಡಿ ವ್ಯವಸ್ಥೆ ಮಾಡಬೇಕಿದೆ. ಕೊರೊನಾ ತಡೆಗಟ್ಟಲು ಬೇಕಾಗುವ ಔಷಧ, ಸ್ಯಾನಿಟೈಸರ್ ಕೊಡಬೇಕೆಂದು ಸಲಹೆ ನೀಡಲಾಗಿದೆ. ಪೌರಕಾರ್ಮಿಕರಿಗೆ ಪ್ರಧಾನಿಗಳೇ ಗೌರವ ಕೊಟ್ಟಿದ್ದಾರೆ. ರಾಜ್ಯದಲ್ಲೂ ಅವರಿಗೆ ಸಿಗಬೇಕಾದ ಗೌರವ ಸಿಗಬೇಕಿದೆ. ದೇಶವನ್ನು ಕಾಯುವ ಸೈನಿಕರಂತೆ, ನಾಗರಿಕರ ಆರೋಗ್ಯ ರಕ್ಷಣೆಗೆ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ 14 ಜನ ಪೌರಕಾರ್ಮಿಕರು ಕೋವಿಡ್ ಗೆ ಬಲಿಯಾಗಿದ್ದಾರೆ. ಇವರಿಗೆ ಪರಿಹಾರ ನೀಡುವ ಕಾರ್ಯ ಆಗಬೇಕಿದೆ. ಸಭೆಯಲ್ಲಿ ವಿಶೇಷ ಆಯುಕ್ತರಾದ ದಯಾನಂದ್, ಉಪ ಆಯುಕ್ತರು ಲಿಂಗಮೂರ್ತಿ, ಜಂಟಿ ಆಯುಕ್ತರು(ಘನತ್ಯಾಜ್ಯ) ಸರ್ಫರಾಜ್ ಖಾನ್, ಹಾಗೂ ಇನ್ನಿತರೆ ಅಧಿಕಾರಿಗಳು ಭಾಗಿಯಾಗಿದ್ದರು.