ಚೆನ್ನೈ(ತಮಿಳುನಾಡು): ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ತೃತೀಯ ಲಿಂಗಿಗಳಿಗೆ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಬಹಿರಂಗಪಡಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಸಿಎಂ ಸ್ಟಾಲಿನ್ ಅವರು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆದೇಶ ಹೊರಡಿಸಿದ್ದರು. ಈ ಉದ್ದೇಶಕ್ಕಾಗಿ ಸರ್ಕಾರವು 1,200 ಕೋಟಿ ರೂ. ಸಬ್ಸಿಡಿಯಾಗಿ ನಿಗದಿಪಡಿಸಿದೆ. ಈ ಮಧ್ಯೆ, ವಿವಿಧ ಪಕ್ಷಗಳು ತೃತೀಯ ಲಿಂಗಿಗಳಿಗೂ ಮಹಿಳೆಯರಂತೆ ಉಚಿತ ಪ್ರಯಾಣವನ್ನು ಒದಗಿಸಬೇಕೆಂದು ಒತ್ತಾಯಿಸಿವೆ.
ಇನ್ನು ಟ್ವಿಟರ್ನಲ್ಲಿ, ಸಿಎಂ ಅವರನ್ನು ಟ್ಯಾಗ್ ಮಾಡಿ ಪತ್ರಕರ್ತರೋರ್ವರು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್‌ಗೆ ಶೀಘ್ರವಾಗಿ ಪ್ರತಿಕ್ರಿಯಿಸಿದ ಸಿಎಂ, "ಮಹಿಳಾ ಕಲ್ಯಾಣ ಮತ್ತು ಹಕ್ಕುಗಳ ಜೊತೆಯಲ್ಲಿ ತೃತೀಯಲಿಂಗಿಗಳ ಜೀವನದ ಬಗ್ಗೆ ಯೋಚಿಸುವುದು ಅನಾದಿ ಕಾಲದಿಂದಲೂ ಡಿಎಂಕೆ ಸರ್ಕಾರದ ಅಭ್ಯಾಸವಾಗಿದೆ", ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನವನ್ನು ಶೀಘ್ರವಾಗಿ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಪಡಿತರದಾರರಿಗೆ 2 ಸಾವಿರ ಹಣ ಘೋಷಿಸಿರುವ ಅವರು, ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣದ ಗಿಫ್ಟ್ ಸಹ ಕೊಟ್ಟಿದ್ದರು. 10 ವರ್ಷಗಳ ಬಳಿಕ ಡಿಎಂಕೆ ತಮಿಳುನಾಡಲ್ಲಿ ಅಧಿಕಾರಕ್ಕೆ ಮರಳಿದೆ.