ಬೆಂಗಳೂರು: ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆಗಾಗಿ ಮೈಲಾನ್ ಕಂಪನಿ ಮೂಲಕ ಈ ತಿಂಗಳ ಒಳಗಾಗಿ 3.63 ಲಕ್ಷ ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸಿನ್-ಬಿ ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಇಂದು ರಾಜ್ಯಗಳಿಗೆ 19,420 ಸೀಸೆ (ವಯಲ್ಸ್) ಲಿಪೋಸೊಮಾಲ್ ಎಂಫೋಟೆರಿಸಿನ್-ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 1030 ವಯಲ್ಸ್ ಒದಗಿಸಲಾಗಿದೆ. ಮೊನ್ನೆ 1270 ವಯಲ್ಸ್ ಹಾಗೂ ಅದಕ್ಕೂ ಮುನ್ನ ಮೂರು ಕಂತುಗಳಲ್ಲಿ 1660 ವಯಲ್ಸ್ ಒದಗಿಸಲಾಗಿತ್ತು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ದೇಶದಲ್ಲಿಯೇ ತ್ವರಿತವಾಗಿ ಲಿಪೋಸೊಮಾಲ್ ಎಂಫೋಟೆರಿಸಿನ್-ಬಿ ಉತ್ಪಾದನೆ ಹೆಚ್ಚಿಸಲು ತುರ್ತು ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ದೇಶದ ಐದು ಫಾರ್ಮಾ ಕಂಪನಿಗಳು ಇದರ ಉತ್ಪಾದನೆ ಮಾಡುತ್ತಿದ್ದು ಈಗ ಹೊಸದಾಗಿ ಮತ್ತೆ ಐದು ಕಂಪನಿಗಳಿಗೆ ಲೈಸನ್ಸ್ ನೀಡಲಾಗಿದೆ. ಈ ಸ್ವದೇಶಿ ಕಂಪನಿಗಳು ಮೇ ತಿಂಗಳಲ್ಲಿ 1.63 ಲಕ್ಷ ಸೀಸೆ ಹಾಗೂ ಜೂನ್ ತಿಂಗಳಲ್ಲಿ 2.55 ಸೀಸೆ ಲಿಪೋಸೊಮಾಲ್ ಎಂಫೋಟೆರಿಸಿನ್ ಬಿ ಉತ್ಪಾದನೆ ಮಾಡಲಿವೆ ಎಂದಿದ್ದಾರೆ.
ಮೈಲಾನ್ ಕಂಪನಿ ಮೂಲಕ ಈ ತಿಂಗಳ ಒಳಗಾಗಿ 3.63 ಲಕ್ಷ ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸಿನ್-ಬಿ ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಸ್ವಲ್ಪಭಾಗ ಈಗಾಗಲೇ ಭಾರತ ತಲುಪಿದೆ. ಯೋಜಿಸಿದಂತೆ ಸಾಗಣೆಯಲ್ಲಿ ಏನೂ ವ್ಯತ್ಯಾಸವಾಗದಿದ್ದರೆ ಉಳಿದ ಬಹುತೇಕ ಭಾಗ ವಾರದೊಳಗೆ ಭಾರತ ತಲುಪಲಿದೆ ಎಂಬುದನ್ನು ನಿರೀಕ್ಷಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜೂನ್ ತಿಂಗಳಲ್ಲಿ 3.15 ಲಕ್ಷ ವಯಲ್ಸ್ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ 2.55 ಲಕ್ಷ ವಯಲ್ಸ್ ಸ್ವದೇಶಿ ಉತ್ಪಾದನೆ ಸೇರಿ ಜೂನ್ ತಿಂಗಳಲ್ಲಿ 5.7 ಲಕ್ಷ ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸಿನ್-ಬಿ ಲಭ್ಯವಿರಲಿವೆ. ಅಗತ್ಯವಾದರೆ ಇನ್ನೂ ಹೆಚ್ಚು ಆಮದು ಮಾಡಿಕೊಳ್ಳುತ್ತೇವೆ. ಸ್ವದೇಶಿ ಉತ್ಪಾದನೆಯೂ ಹೆಚ್ಚಾಗುತ್ತಿದ್ದು, ಇದರ ಹಂಚಿಕೆ ನಿರಂತರವಾಗಿ ನಡೆಯಲಿದೆ. ಕಪ್ಪುಶಿಲೀಂದ್ರ ಹಳೆ ಕಾಯಿಲೆಯಾಗಿದ್ದು, ಇದಕ್ಕೆ ಸಾಕಷ್ಟು ಪರ್ಯಾಯ ಔಷಧಗಳು ಲಭ್ಯವಿವೆ. ಹಾಗಾಗಿ ಇದಕ್ಕೆ ಔಷಧ ಕೊರತೆಯಾಗಬಹುದು ಎಂದು ಗಾಬರಿಗೊಳಗಾಗಬೇಡಿ ಎಂದು ಸಚಿವರು ಸಾರ್ವಜನಿಕರಲ್ಲಿ ವಿನಂತಿಸಿದರು.