ಮುಂಬೈ: ಭಾರತ ತಂಡದ ಆಟಗಾರರಾದ ಜಸ್ಪ್ರೀತ್ ಬೂಮ್ರಾ ಸೇರಿದಂತೆ ನಾಲ್ವರು ಕ್ರಿಕೆಟಿಗರ ಹೆಸರನ್ನು 'ಅರ್ಜುನ ಅವಾರ್ಡ್'ಗೆ ಬಿಸಿಸಿಐ ಶಿಫಾರಸ್ಸು ಮಾಡಿದೆ.
ಸೀಮಿತ ಓವರ್ಗಳಲ್ಲಿ ಕಳೆದೆರಡು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ಬೂಮ್ರಾ, ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಬೆನ್ನೆಲುಬಾಗಿರುವ ಮೊಹಮ್ಮದ್ ಶಮಿ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಮಹಿಳಾ ತಂಡದ ಲೆಗ್ ಸ್ಪಿನ್ನರ್ ಪೂನಮ್ ಯಾದವ್ ಹೆಸರನ್ನು 'ಅರ್ಜುನ್ ಪ್ರಶಸ್ತಿ'ಗೆ ಭಾರತ ಸರ್ಕಾರದ ಕ್ರೀಡಾ ಸಚಿವಾಲಯಕ್ಕೆ ಕಳುಹಿಸಲಾಗಿದೆ.
ಕಳೆದ ವರ್ಷ ಮಹಿಳಾ ತಂಡದ ಸ್ಫೋಟಕ ಆಟಗಾರ್ತಿ ಸ್ಮೃತಿ ಮಂದಾನ ಅವರಿಗೆ 'ಅರ್ಜುನ ಅವಾರ್ಡ್' ನೀಡಲಾಗಿತ್ತು. ಸುಪ್ರಿಂಕೋರ್ಟ್ ನೇಮಿಸಿದ ಆಡಳಿತ ಸಮಿತಿ (COA), ವಿದೇಶಿ ಸರಣಿಗಳಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಬಿಸಿಸಿಐ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಆಟಗಾರರ ಹೆಸರನ್ನು ಶಿಫಾರಸ್ಸು ಮಾಡಿದೆ.
ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬೂಮ್ರಾ, 9 ಪಂದ್ಯಗಳಲ್ಲಿ 48 ವಿಕೆಟ್ ಪಡೆದಿದ್ದಾರೆ. ಶಮಿ ಕಳೆದ 4 ವರ್ಷಗಳಲ್ಲಿ 68 ಪಂದ್ಯದ ಮೂಲಕ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ರವೀಂದ್ರ ಜಡೇಜಾ ಕೂಡ ಭಾರತ ತಂಡದ ಪ್ರಮುಖ ಆಟಗಾರರ ಪೈಕಿ ಒಬ್ಬರು.
ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್ನಲ್ಲಿ ಬೂಮ್ರಾ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.