ಬಳ್ಳಾರಿ: ಮೈಸುಡುವ ಬಿಸಿಲು, ಜೀವಜಲದ ಹುಡುಕಾಟ ಮನುಷ್ಯರಿಗೆ ಮಾತ್ರವಲ್ಲ, ಈಗ ಪ್ರಾಣಿ-ಪಕ್ಷಿಗಳನ್ನೂ ಆವರಿಸಿಕೊಂಡಿದೆ.
ತಾಲೂಕಿನ ರೂಪನಗುಡಿ ಹೋಬಳಿಯಲ್ಲಿ ಆಕಾಶದಿಂದ ಧರೆಗಿಳಿದ ಪಕ್ಷಿಯೊಂದು ನೀರಿಗಾಗಿ ತಡಕಾಡಿದೆ. ಈ ಹಕ್ಕಿ ವಿಪರೀತ ನೀರ ದಾಹ ಎದುರಿಸುತ್ತಿತ್ತು. ನೀರಡಿಕೆ ನಿವಾರಿಸಿಕೊಳ್ಳುವ ಸಲುವಾಗಿಯೇ ಹೋಬಳಿ ಮುಖ್ಯರಸ್ತೆಯಲ್ಲಿ ಹರಿಯುತ್ತಿದ್ದ ಚರಂಡಿ ನೀರು ಸೇವಿಸಲು ತನ್ನ ಮೊನಚಾದ ಬಾಯಿ ಚಾಚಿದೆ. ಬಾಯಾರಿಕೆ ನಿವಾರಿಸಿಕೊಳ್ಳುವಷ್ಟು ಶುದ್ಧ ನೀರು ಅಲ್ಲಿರದ ಕಾರಣ,ಮತ್ತೊಂದೆಡೆ ಹೋಗಿ ಅದು ನೀರು ಕುಡಿಯಲು ಆರಂಭಿಸುತ್ತದೆ. ಅಲ್ಲಿಯೂ ಕೂಡ ಹಕ್ಕಿಗೆ ತೃಪ್ತಿ ಸಿಗಲಿಲ್ಲ. ಆಗ ಅದು ಬೇರೆಡೆಗೆ (ಚರಂಡಿ ನೀರು ಹರಿಯುವ ರಸ್ತೆಯ ಮಧ್ಯಭಾಗದಲ್ಲಿ) ಹೋಗಿ ನೀರು ಕುಡಿಯಲು ಶುರುಮಾಡುತ್ತೆ. ನೀರಿನ ದಾಹ ತೀರಿಸುವಷ್ಟರ ಮಟ್ಟಿಗೆ ತನ್ನ ಬಾಯಿಗೆ ನೀರು ಲಭ್ಯವಾಗದ ಕಾರಣ, ಏನೂ ತೋಚದಂತೆ ಸ್ವಲ್ಪಹೊತ್ತು ಅಲ್ಲಿಯೇ ಕುಳಿತುಕೊಂಡ ಹಕ್ಕಿ ತನ್ನ ಆಯಾಸವನ್ನು ನೀಗಿಸಿಕೊಳ್ಳುತ್ತದೆ.
ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ದಾರಿ ಹೋಕರು ಪ್ಲಾಸ್ಟಿಕ್ ಜಗ್ವೊಂದರಲ್ಲಿ ಶುದ್ಧ ಕುಡಿಯುವ ನೀರು ತಂದು ಆ ಪಕ್ಷಿಯ ಬಾಯಿಯೊಳಗೆ ಹಾಕುತ್ತಿದ್ದಂತೆಯೇ ನೀರು ಕುಡಿಯಲು ಆತುರಾತುರವಾಗಿ ಹವಣಿಸುತ್ತಿರುವ ದೃಶ್ಯವಂತೂ ಮನಕಲುಕುವಂತಿದೆ.