ಶಿವಮೊಗ್ಗ: ಭದ್ರಾವತಿ ಕ್ಷೇತ್ರದ ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಲು ನಾನು ವೈಯಕ್ತಿಕ ಹಣವನ್ನು ನೀಡಲು ಸಿದ್ದ ಎಂದು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ತಿಳಿಸಿದ್ದಾರೆ.
ಇಂದು ತಮ್ಮ ಕ್ಷೇತ್ರದ 1 ಕೋಟಿ ರೂ. ಅನುದಾನವನ್ನು ಕೋವಿಡ್ಗಾಗಿಯೇ ನೀಡಿದ್ದಾರೆ. ಇದರಲ್ಲಿ ಭದ್ರಾವತಿಯ ಎಂಪಿಎಂ ಕಲ್ಯಾಣ ಮಂದಿರದಲ್ಲಿ ಜಿಲ್ಲಾಡಳಿತ ಸಹಕಾರದೊಂದಿದೆ 100 ಬೆಡ್ನ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ.
ಕ್ಷೇತ್ರದ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ಎರಡು ಆ್ಯಂಬುಲೆನ್ಸ್ ನೀಡಿದ್ದಾರೆ. ಈ ಬೆಡ್‌ಗಳು ಸಾಕಾಗದೆ ಇನ್ನೂ 100 ಬೆಡ್‌ಗಳು ಬೇಕಾದ್ರೆ ಶಾಸಕರ ಅನುದಾನದಲ್ಲಿ ನಿರ್ಮಿಸಿ ಕೊಡುವುದಾಗಿ ತಿಳಿಸಿದರು. ಜೊತೆಗೆ ಬೇರೆ ವ್ಯವಸ್ಥೆಗಳು ಬೇಕು ಅಂದ್ರೆ, ನಾನು ವೈಯಕ್ತಿಕವಾಗಿ ಎಷ್ಟು ಲಕ್ಷ ಹಣ ನೀಡಲು ಸಿದ್ದನಿದ್ದೇನೆ ಎಂದರು.
ಶಾಸಕರ ಆ್ಯಂಬುಲೆನ್ಸ್ ಜೊತೆಗೆ ಧರ್ಮಸ್ಥಳ ಸಂಘ ಹಾಗೂ ಸಾಯಿಬಾಬ ಟ್ರಸ್ಟ್ಗಳು ತಲಾ ಒಂದೊಂದು ಆ್ಯಂಬುಲೆನ್ಸ್ ನೀಡಿದ್ದಾರೆ. ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಈಗ ಇರುವ ಆಕ್ಸಿಜನ್ ಬೆಡ್ಗಳನ್ನು ಹೊರತುಪಡಿಸಿ, ಮತ್ತೆ 50 ಬೆಡ್ ತಯಾರು ಮಾಡಲು ತಿಳಿಸಲಾಗಿದೆ.
ಸದ್ಯ ಭದ್ರಾವತಿ ತಾಲೂಕು ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಇದರಿಂದ ನಾನ್ ಕೋವಿಡ್ ರೋಗಿಗಳಿಗಾಗಿ ವಿಐಎಸ್ಎಲ್ ಆಸ್ಪತ್ರೆ ಮೀಸಲಾಗಿಡಲಾಗಿದೆ. ತಾಲೂಕು ಆಸ್ಪತ್ರೆಯಿಂದ ವಿಐಎಸ್ಎಲ್ ಆಸ್ಪತ್ರೆಗೆ ಓಡಾಡಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ ತಿಳಿಸಿದ್ದಾರೆ.
ಈ ವೇಳೆ ತಹಶೀಲ್ದಾರ್ ಸಂತೋಷ್, ಡಿಹೆಚ್ಒ ಡಾ.ರಾಜೇಶ್ ಸುರುಗಿಹಳ್ಳಿ ಸೇರಿದಂತೆ ತಾಲೂಕು ಅಧಿಕಾರಿಗಳು ಹಾಜರಿದ್ದರು.