ಬೆಂಗಳೂರು: ಈ ವರ್ಷದ ಪ್ರಪ್ರಥಮ ಸೂರ್ಯ ಗ್ರಹಣಕ್ಕೆ ಇಂದು ಜಗತ್ತು ಸಾಕ್ಷಿಯಾಗಿದೆ. ಈ ಗ್ರಹಣವು ಭಾರತದಲ್ಲಿ ಕಾಣುವುದಿಲ್ಲವಾದರೂ ವಿಶ್ವದ ಹಲವು ದೇಶಗಳಲ್ಲಿ ಗ್ರಹಣದ ದರ್ಶನವಾಗುತ್ತಿದೆ. ಸಂಪೂರ್ಣ ಸೂರ್ಯ ಗ್ರಹಣದ ಕಾಲಾವಧಿ 3 ನಿಮಿಷ, 51 ಸೆಕೆಂಡ್ಗಳು ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಮಧ್ಯಾಹ್ನ 1.42ಕ್ಕೆ ಗ್ರಹಣದ ಆರಂಭ ಕಾಲ ಹಾಗೂ ಸಂಜೆ 6.41ಕ್ಕೆ ಗ್ರಹಣ ಮೋಕ್ಷ ಕಾಲ ಎಂದು ಹೇಳಲಾಗಿದೆ.
ಕೆನಡಾ, ರಷ್ಯಾ, ಗ್ರೀನ್ ಲ್ಯಾಂಡ್, ಸೈಬೀರಿಯಾ, ಉತ್ತರ ಧೃವ ಪ್ರದೇಶ ಸೇರಿದಂತೆ ಯುರೋಪ್ & ಏಷ್ಯಾದ ಕೆಲವು ದೇಶಗಳಲ್ಲಿ ಸೂರ್ಯ ಗ್ರಹಣ ಗೋಚರವಾಗುತ್ತಿದೆ. ಹಿಂದಿನಿಂದಲೂ ಗ್ರಹಣದ ದಿನ ಸಾಕಷ್ಟು ಮೂಢನಂಬಿಕೆಗಳ ಆಚರಣೆಗಳು ಭಾರತದಲ್ಲಿ ನಡೆದುಕೊಂಡು ಬಂದಿದೆ. ಈ ಮೂಢನಂಬಿಕೆಗಳನ್ನ ಹೋಗಲಾಡಿಸಲು ವೈಚಾರಿಕ ಪ್ರಜ್ಞೆ ಇರುವವರು ನಾನಾ ಪ್ರಯತ್ನಗಳನ್ನ ಮಾಡುತ್ತ ಬಂದಿದ್ದಾರೆ.
ಇಂದು ಸಹ ಸೂರ್ಯಗ್ರಹಣ ವೇಳೆ ಆಹಾರ ಸೇವನೆ ಮಾಡುವ ಮೂಲಕ ಅವೈಜ್ಞಾನಿಕ ಮೂಢನಂಬಿಕೆ ಆಗಿರೋ ಗ್ರಹಣದ ವೇಳೆ ಆಹಾರ ಸೇವನೆ ಮಾಡಬಾರದು ಎನ್ನುವುದನ್ನು ಹೋಗಲಾಡಿಸೋ ಕೆಲಸಕ್ಕೆ ಬೆಂಗಳೂರಿನ ಮೂಢನಂಬಿಕೆ ವಿರೋಧಿ ಒಕ್ಕೂಟ ಮುಂದಾಗಿದೆ. ಸೂರ್ಯಗ್ರಹಣದ ವೇಳೆ ಬೆಂಗಳೂರಿನ ಪ್ರೆಸ್ ಕ್ಲಬ್ ಬಳಿ ಹಣ್ಣು ತಿಂಡಿ ತಿನಿಸುಗಳನ್ನ ತಿನ್ನುವ ಮೂಲಕ ಆಚರಣೆಗಳನ್ನ ಒಕ್ಕೂಟ ವಿರೋಧಿಸಿದೆ.