ಮೈಸೂರು: ಅಂತಿಮ ಘಟ್ಟದಲ್ಲಿ ಮಿಂಚಿದ ಮುಂಬೈಚೆ ರಾಜೆ ತಂಡ ಇಂಡೋ ಇಂಟರ್ ನ್ಯಾಷನಲ್ ಪ್ರಿಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್) ಟೂರ್ನಿಯಲ್ಲಿ ಜಯ ತನ್ನದಾಗಿಸಿಕೊಂಡಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡ 32-28 ಅಂಕಗಳಿಂದ ಚೆನ್ನೈಗೆ ಸೋಲುಣಿಸಿ ಪೂರ್ಣ ಎರಡು ಅಂಕ ತನ್ನದಾಗಿಸಿಕೊಂಡಿತು.
ಮೊದಲ ಕ್ವಾರ್ಟರ್ ಕೊನೆಕೊಂಡಾಗ 7-7ರ ಸಮಬಲ ಸಾಧಿಸಿದ್ದವು. ರೇಡಿಂಗ್ ಮತ್ತು ರಕ್ಷಣೆಯಲ್ಲಿ ಪರಿಣಾಮಕಾರಿ ಪ್ರದರ್ಶನ ತೋರಿದ ಚೆನ್ನೈ 8-5ರಲ್ಲಿ ಮುನ್ನಡೆ ಕಂಡುಕೊಳ್ಳುವಲ್ಲಿ ಸಾಫಲ್ಯ ಕಂಡಿತು.
ಎರಡನೇ ಅವಧಿಯಲ್ಲಿ ಆಲ್ಔಟ್ ಮಾಡಿ 20-13ರ ಮುನ್ನಡೆಯನ್ನು ಚೆನ್ನೈ ಸಾಧಿಸಿತು. ಧೃತಿಗೆಡದ ಮುಂಬಯಿ ಆಟಗಾರರು 3ನೇ ಕ್ವಾರ್ಟರ್‍ನಲ್ಲಿ ದಿಟ್ಟ ಪ್ರತಿರೋಧ ಒಡ್ಡುವ ಮೂಲಕ ತಿರುಗೇಟು ನೀಡಿದರು.
ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್ ಉಭಯ ತಂಡಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಎರಡನೇ ಅವಧಿಯಲ್ಲಿ ಹಿನ್ನಡೆ ಕಂಡಿದ್ದ ಮುಂಬಯಿ ಮಹೇಶ್ ಮಗ್ದಮ್, ಮಣಿವೀರ್ ಕಾಂತ್ ಮತ್ತು ಅರುಲ್ ಅವರ ಅಚ್ಚರಿ ಪ್ರದರ್ಶನದಿಂದ ಪುಟಿದೆದ್ದಿತು.
ಅಂತಿಮವಾಗಿ ಮುಂಬೈ 32-28 ಅಂಕ ಪಡೆದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿತು. ಚೆನ್ನೈ ಚಾಲೆಂಜರ್ಸ್ 5 ಅಂಕಗಳೊಂದಿಗೆ ತೃತೀಯ ಸ್ಥಾನಕ್ಕೆ ಕುಸಿಯಿತು. ಮುಂಬೈ ಅಗ್ರ ಸ್ಥಾನಕ್ಕೆ ಏರಿತು.
ಚೆನ್ನೈ ತಂಡದ ಪರ ಇಳಯರಾಜ 6 ಅಂಕ ಸಂಪಾದಿಸಿದರೆ, ನಮ್‍ದೇವ್ ಐಶ್‍ವಾಲ್ಕರ್ ಮತ್ತು ಆರ್.ವೆಂಕಟೇಶ್ ತಲಾ 5 ಅಂಕ ಗಳಿಸಿ ತಂಡದ ವೀರೋಚಿತ ಹೋರಾಟಕ್ಕೆ ಸಾಕ್ಷಿಯಾದರು. ಮುಂಬೈ ತಂಡದ ಪರ ಮಹೇಶ್ ಮಗ್ದಮ್ 7 ಅಂಕ, ಮಣಿವೀರ್ ಕಾಂತ್ ಮತ್ತು ಎ.ಆರುಲ್ ತಲಾ 6 ಅಂಕ ಗಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.
ಅಂಕ ಹಂಚಿಕೊಂಡ ರೈನೋಸ್:
ಎ ಗುಂಪಿನ ಪಂದ್ಯದಲ್ಲಿ ಬೆಂಗಳೂರು ರೈನೋಸ್ ಮತ್ತು ಹರಿಯಾಣ ಹೀರೋಸ್ 36-36 ಅಂಕಗಳಿಂದ ಡ್ರಾ ಸಾಧಿಸಿ ಅಂಕ ಹಂಚಿಕೊಂಡರೆ, ದಿನದ ಇನ್ನೊಂದು ಪಂದ್ಯದಲ್ಲಿ ಪ್ರಬಲ ಡೀಲರ್ ಡೆಲ್ಲಿ ತಂಡ 40-37 ಅಂಕಗಳಿಂದ ತೆಲುಗು ಬುಲ್ಸ್ ತಂಡವನ್ನು ಹಣಿದು ಪೂರ್ಣ ಎರಡು ಅಂಕ ತನ್ನದಾಗಿಸಿಕೊಂಡಿತು.