ಲಂಡನ್ : ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ರನ್ನು ಉದ್ದೀಪನ ಮದ್ದು(ಮಾಧಕ ದ್ರವ್ಯ) ಸೇವಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 21 ದಿನಗಳವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿಷೇಧಿಸಲಾಗಿದೆ.
ಇಂಗ್ಲೆಂಡ್ ತಂಡ ಘೋಷಿಸಿರುವ 15 ಆಟಗಾರರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಅಲೆಕ್ಸ್ ಹೇಲ್ಸ್ ಇದೀಗ ಎರಡನೇ ಬಾರಿ ಡ್ರಗ್ ಟೆಸ್ಟ್ನಲ್ಲಿ ಅನುತ್ತೀರ್ಣರಾದ ಹಿನ್ನಲೆಯಲ್ಲಿ ಅವರಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ 3 ವಾರಗಳ ಕಾಲ ಕ್ರಿಕೆಟ್ನಿಂದ ನಿಷೇಧ ಹೇರಿದೆ.
ಇಂಗ್ಲೆಂಡ್ ಕ್ರಿಕೆಟ್ ನಿಯಮದ ಪ್ರಕಾರ ಮೊದಲ ಬಾರಿಗೆ ಡ್ರಗ್ ಟೆಸ್ಟ್ನಲ್ಲಿ ಫೇಲ್ ಆದವರಿಗೆ ಇಸಿಬಿ ಹಾಗೂ ಕ್ರಿಕೆಟರ್ಸ್ ಅಸೋಸಿಯೇಷನ್ ಒಳಗೆ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುತ್ತದೆ. 2 ನೇ ಬಾರಿ ಫೇಲ್ ಆದರೆ, 3 ವಾರಗಳ ಕಾಲ ಎಲ್ಲಾ ವಿಭಾಗದ ಕ್ರಿಕೆಟ್ನಿಂದ ಬ್ಯಾನ್ ಮಾಡಲಾಗುತ್ತದೆ. ಒಂದು ವೇಳೆ ಅದೇ ಆಟಗಾರ ಮೂರನೇ ಬಾರಿ ಡ್ರಗ್ ಟೆಸ್ಟ್ನಲ್ಲಿ ಫೇಲ್ ಆದಲ್ಲಿ ಆತನ ಜತೆಗಿನ ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಒಪ್ಪಂದವನ್ನು ತಕ್ಷಣವೇ ನಿಲ್ಲಿಸಬಹುದು ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಪಬ್ವೊಂದರಲ್ಲಿ ಗಲಾಟೆ ಮಾಡಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದ ಬೆನ್ ಸ್ಟೋಕ್ಸ್ಗೆ 6 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿಷೇಧ ಹೇರಲಾಗಿತ್ತು. ಆ ಸಮಯದಲ್ಲೂ ಹೇಲ್ಸ್ ಸ್ಟೋಕ್ಸ್ ಜೊತೆ ಕಾಣಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಸ್ಟೋಕ್ಸ್ರನ್ನು ಪೊಲೀಸರು ಬಂಧಿಸಿದ್ದರು. ಜೊತೆಗೆ ಅವರಿಗೆ ಇಸಿಬಿ 17500 ಪೌಂಡ್ಸ್ ದಂಡವಿಧಿಸಿತ್ತು. ಹೇಲ್ಸ್ ಇಂಗ್ಲೆಂಡ್ ಪರ 69 ಏಕದಿನ ಪಂದ್ಯಗಳಲ್ಲಿ 2419 ರನ್ಗಳಿಸಿದ್ದಾರೆ. 6 ಶತಕ ಹಾಗೂ 14 ಅರ್ಧಶತಕ ಕೂಡ ಸೇರಿವೆ.