ಮಂಡ್ಯ: ಮದುವೆಯಾಗುವುದಾಗಿ ನಂಬಿಸಿ ಯುವಕನೋರ್ವ ಬಾಲಕಿ ಜತೆ ಲೈಂಗಿಕ ಸಂಬಂಧ ಬೆಳೆಸಿ ಗರ್ಭವತಿಯಾದ ನಂತರ ಕೈಕೊಟ್ಟಿರುವ ಘಟನೆ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನಲ್ಲಿ ನಡೆದಿದೆ.
ಕೆ ಆರ್ ಪೇಟೆಯ ಗ್ರಾಮವೊಂದರ ನಿವಾಸಿ ಲಕ್ಷ್ಮಣ ಎಂಬಾತ ಬಾಲಕಿಯನ್ನು ಅತ್ಯಾಚಾರ ಮಾಡಿರುವ ಆರೋಪಿ. ಲಕ್ಷ್ಮಣ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದಾನೆ. ಎದುರು ಮನೆಯ 15 ವರ್ಷದ ಬಾಲಕಿಯನ್ನು ಈತ ಪ್ರೀತಿ ಮಾಡುತ್ತಿದ್ದ, ಬಳಿಕ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿಗೂ ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ.
ಕೆಲ ತಿಂಗಳ ನಂತರ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆ ವೈದ್ಯರು ಬಾಲಕಿಗೆ ಸ್ಕ್ಯಾನಿಂಗ್ ಮಾಡಿದಾಗ ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದಿದೆ.
ಬಾಲಕಿಯನ್ನು ಈ ಬಗ್ಗೆ ಪೋಷಕರು ಕೇಳಿದಾಗ, ಲಕ್ಷ್ಮಣ ಎಂಬಾತ ನನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ಸತ್ಯ ಬಾಯ್ಬಿಟ್ಟಿದ್ದಾಳೆ. ಕೂಡಲೇ ಪೋಷಕರು ಕೆ ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಲಕ್ಷ್ಮಣನನ್ನು ಬಂಧಿಸಿದ್ದಾರೆ.