ಚಿಕ್ಕಬಳ್ಳಾಪುರ: ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡಿಸಲಿನಲ್ಲಿದ್ದ ಸೀಮೆ ಹಸುವಿನ ಕರುವೊಂದು ಸಜೀವ ದಹನವಾಗಿರೋ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಡಬೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ನೋಡ ನೋಡುತ್ತಿದ್ದಂತೆ 5 ನಿಮಿಷದಲ್ಲಿ ಗುಡಿಸಲು ಬೆಂಕಿಗಾಹುತಿಯಾಗಿ ಸೀಮೆ ಹಸುವಿನ ಕರು ಸುಟ್ಟು ಕರಕಲಾಗಿದೆ. ಉಳಿದ ಮೂರು ಸೀಮೆ ಹಸುಗಳಿಗೆ ತೀವ್ರತರವಾದ ಸುಟ್ಟ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ನರಳಾಟ ನಡೆಸಿವೆ.
ಈ ಸೀಮೆ ಹಸುಗಳು ಬಾಲಪ್ಪ-ನರಸಮ್ಮ ದಂಪತಿಗೆ ಸೇರಿದವು. ಸಿಡಿಲಿನ ಆರ್ಭಟಕ್ಕೆ ಬೆಚ್ಚಿಬಿದ್ದು ಗುಡಿಸಲಿನಿಂದ ಓಡಿ ಬಂದಿರೋ ಬಾಲಪ್ಪ-ನರಸಮ್ಮ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಬದುಕಿಗೆ ಆಧಾರವಾಗಿದ್ದ ಸೀಮೆ ಹಸುವಿನ ಕರು ಕಣ್ಣೆದುರಿಗೆ ಬೆಂಕಿಗಾಹುತಿಯಾದ ದೃಶ್ಯ ಕಂಡ ದಂಪತಿ ಕಣ್ಣೀರಧಾರೆಯೇ ಹರಿಸಿದ್ದಾರೆ.
ಸದ್ಯ ಹಸುಗಳ ಪರಿಸ್ಥಿತಿ, ಕರುವನ್ನು ಕಳೆದುಕೊಂಡ ರೈತ ದಂಪತಿಗಳಿಗೆ ದಿಕ್ಕು ತೋಚದೆ ಕಂಗೆಟ್ಟು ಕುಳಿತಿದ್ದಾರೆ.