ಮುಂಬೈ: ಆರ್ಬಿಐ ಸತತ 3ನೇ ಬಾರಿ ತನ್ನ ಬಡ್ಡಿದರ ಕಡಿತ ಮಾಡಿದ್ದು, ಇದರ ನಡುವೆಯೂ ಮುಂಬೈ ಷೇರು ಮಾರುಕಟ್ಟೆ ಗುರುವಾರದ ವಹಿವಾಟಿನಲ್ಲಿ ಮಾರಾಟದ ಒತ್ತಡಕ್ಕೆ ಸಿಲುಕಿ ಇಳಿಕೆ ದಾಖಲಿಸಿದೆ.
ಉಕ್ಕು, ಪಿಎಸ್ಯು ಬ್ಯಾಂಕ್ಗಳು, ಐಟಿ, ಮೀಡಿಯಾ, ಆಟೋ ಹಾಗೂ ಎಫ್ಎಂಸಿಜಿ ವಲಯದ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡು ಬಂದಿದೆ.
ಗುರುವಾರ ಅಂತ್ಯದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 553.83 ಅಂಶಗಳ ಇಳಿಕೆಯೊಂದಿಗೆ 39,529.72 ಅಂಶಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 177.90 ಅಂಶಗಳ ಕುಸಿತದೊಂದಿಗೆ 11,843.75 ಅಂಶಗಳ ಮಟ್ಟದಲ್ಲಿ ಕೊನೆಗೊಂಡಿದೆ.
ಕುಸಿತಕ್ಕೆ ಕಾರಣವಾದ ಅಂಶಗಳು
ಡಿಎಚ್ಎಫ್ಎಲ್ ಬಿಕ್ಕಟ್ಟು:
ರೇಟಿಂಗ್ ಏಜೆನ್ಸಿಗಳಾದ ಕ್ರಿಸ್ಲ್, ಇಕ್ರಾ ಮತ್ತು ಕೇರ್ ಸಂಸ್ಥೆಗಳು ಡೆವನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ನ (ಡಿಎಚ್ಎಫ್ಎಲ್) ಶ್ರೇಣಿಯನ್ನು ಕಡಿತಗೊಳಿಸಿವೆ. ಸಾಲ ಸೇವೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಕಡಿತಕ್ಕೆ ಕಾರಣವಾಗಿದೆ. ಹೀಗಾಗಿ, ಹೂಡಿಕೆದಾರರು ಡಿಎಚ್ಎಫ್ಎಲ್ನಿಂದ ವಿಮುಖರಾಗಿದ್ದು, ಷೇರುಗಳ ಮೌಲ್ಯದಲ್ಲಿ ಶೇ 15ರಷ್ಟು ಕುಸಿತ ದಾಖಲಿಸಿದೆ.
ನಗದ ದ್ರವ್ಯತೆ ವಿವಾದ:
ಪ್ರಸ್ತುತ ನಗದು ದ್ರವ್ಯತೆ ಬಿಕ್ಕಟ್ಟು ನಿಭಾಯಿಸಲು ಆರ್ಬಿಐ, ಯಾವುದೇ ನೀತಿಗಳನ್ನು ಜಾರಿಗೆ ತಂದಿಲ್ಲ. ನಗದು ದ್ರವ್ಯತೆಯ ಪ್ರಮಾಣ ಮತ್ತಷ್ಟು ಹದಗೆಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ದ್ರವ್ಯತೆ ಪರಿಸ್ಥಿತಿಯನ್ನು ಪರಿಶೀಲಿಸಲು ಆಂತರಿಕ ಕಾರ್ಯಕಾರಿಣಿ ತಂಡವನ್ನು ಸ್ಥಾಪಿಸಿ ಆರು ವಾರಗಳ ಒಳಗೆ ವರದಿ ಒಪ್ಪಿಸುವಂತೆ ಸೂಚಿಸಿದೆ.
ಜಿಡಿಪಿ ಕುಂಠಿತ:
ಆರ್ಥಿಕತೆ ಕುಂಠಿತವಾಗಿದೆ ಎಂಬ ಕಳವಳ ಪರಿಸ್ಥಿತಿಯಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್, ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಪ್ರಸ್ತುತ ವಿತ್ತೀಯ ವರ್ಷದಲ್ಲಿ ಶೇ 7ರಷ್ಟು ದಾಖಲಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಈ ಹಿಂದೆ ಜಿಡಿಪಿ 7.2ರಷ್ಟು ಹೆಚ್ಚಾಗಲಿದೆ ಎಂದು ಊಹಿಸಲಾಗಿತ್ತು. ಇಂತಹ ವಿತ್ತೀಯ ನಡೆಗಳು ಹೂಡಿಕೆದಾರರ ಮೇಲೆ ಪ್ರಭಾವಿಸಿ ಪೇಟೆಯಲ್ಲಿ ಕುಸಿತಕ್ಕೆ ಕಾರಣವಾಗಿವೆ.