ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ಜಿಲ್ಲೆಯ ಅವಳಿ ತಾಲೂಕುಗಳಾದ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಲ್ಲಿ ಸೋಂಕಿನ ಪ್ರಭಾವ ಹೆಚ್ಚಾಗಿದೆ. ಈಗಾಗಲೇ ಕೊರೊನಾ ಹೆಚ್ಚಾಗುತ್ತಿದ್ದರಿಂದ ಆಸ್ಪತ್ರೆಯಲ್ಲಿ ಬೆಡ್ಗಳ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಾರದಲ್ಲಿ ಮೂರು ದಿನ ಕಂಪ್ಲೀಟ್ ಲಾಕ್ಡೌನ್ ಘೋಷಿಸಲಾಗಿದೆ.
ಜಿಲ್ಲೆಯ ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕುಗಳನ್ನು ವಾರದ ಮೂರು ದಿನ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿಂದು ಈ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ, ಈ ಹಿಂದೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಯಾವುದೇ ಕಾರಣಕ್ಕೂ ವಾರದ ಲಾಕ್ಡೌನ್ ಮಾಡೋಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ತಾಲೂಕಿನಲ್ಲಿ ಲಾಕ್ಡೌೆನ್ಗೆ ನಿರ್ಧಾರ ಮಾಡಿರುವುದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಗುರುವಾರ, ಶುಕ್ರವಾರ, ಶನಿವಾರ ಸಂಪೂರ್ಣ ಬಂದ್ ಇರುತ್ತದೆ ಎಂದು ಶಾಸಕ ರೇಣುಕಾಚಾರ್ಯ ಮಾಹಿತಿ ನೀಡಿದರು. ಭಾನುವಾರ ,ಸೋಮವಾರ ಮಂಗಳವಾರ, ಬುಧವಾರ ಮಾತ್ರ ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದ ಮೂರ ದಿನಗಳು ಸಂಪೂರ್ಣ ಬಂದ್ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಈ ಲಾಕ್ಡೌನ್ ಅವಧಿಯಲ್ಲಿ ಕೇವಲ ಮೆಡಿಕಲ್ ಎಮರ್ಜೆನ್ಸಿ, ಪೆಟ್ರೋಲ್, ಹಾಲು ಉತ್ಪನ್ನ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಈ ಆದೇಶ ನಾಳೆಯಿಂದಲೇ ಜಾರಿಯಾಗುವಂತೆ ಶಾಸಕ ಎಂ.ಪಿ ರೇಣುಕಾಚಾರ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಅದೇಶವನ್ನೇ ಧಿಕ್ಕರಿಸಿ ವಾರದ ಲಾಕ್ಡೌನ್ಗೆ ಪ್ಲಾನ್ ಮಾಡಲಾಗಿದೆ. ಇನ್ನು ಸಂಸದ ಜಿಎಂ ಸಿದ್ದೇಶ್ವರ್ ವಾರದಲ್ಲಿ ನಾಲ್ಕು ದಿನ ಕಂಪ್ಲೀಟ್ ಲಾಕ್ಡೌನ್ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಆದರೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.