ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶ ಸರ್ಕಾರವು ಕೋವಿಡ್ ಸಾವಿನ ಸಂಖ್ಯೆ ಮರೆಮಾಚಿದೆ ಎಂದು ಆರೋಪಿಸಲಾಗಿದೆ. ಇಂದೋರ್ ನಗರದ ಶವಾಗಾರದಲ್ಲಿ ಕಳೆದ ತಿಂಗಳು 1500 ಕ್ಕೂ ಹೆಚ್ಚು ಜನರನ್ನು ಅಂತ್ಯಕ್ರಿಯೆ ಮಾಡಲಾಗಿತ್ತು.
ಇಂದೋರ್ ಆರೋಗ್ಯ ಇಲಾಖೆ ತನ್ನ ಕೊರೊನಾ ಬುಲೆಟಿನ್ನಲ್ಲಿ ಸಾವಿನ ಸಂಖ್ಯೆಯನ್ನು ನಿತ್ಯ ಬಿಡುಗಡೆ ಮಾಡುತ್ತದೆ. ಆದರೂ, ನಗರದ ಸ್ಮಶಾನಗಳ ನೋಟವು ಸಂಪೂರ್ಣವಾಗಿ ವಿಭಿನ್ನವಾದ ಚಿತ್ರಣವನ್ನೇ ನೀಡುತ್ತಿದೆ.
ಈಟಿವಿ ಭಾರತ್ ತಂಡವು ನಗರದ 'ಪಂಚಕುಯಾ ಮುಕ್ತೀಧಾಮ್' ಶವಾಗಾರವನ್ನು ತಲುಪಿದಾಗ, ಅಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿ ಪೂನಮ್ ಬಾಬಾ, ಹಲವಾರು ಶವಗಳನ್ನು ನಿತ್ಯವೂ ಅಂತ್ಯಕ್ರಿಯೆ ಮಾಡಲಾಗುತ್ತಿದೆ ಎಂದು ಹೇಳಿದರು.
ಏಪ್ರಿಲ್ 30 ರಂದು 35 ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗಿದ್ದು, ಅದರಲ್ಲಿ 20 ಕೋವಿಡ್ ಪಾಸಿಟಿವ್ ರೋಗಿಗಳದ್ದು ಎಂದಿದ್ದಾರೆ.
ಆದ್ರೆ ರಾಜ್ಯದ ಕೊರೊನಾ ಬುಲೆಟಿನ್ನಲ್ಲಿ ಕೇವಲ 7 ಕೋವಿಡ್ ಸಾವುಗಳು ಎಂದು ವರದಿಯಾಗಿತ್ತು. ಶವಾಗಾರದಲ್ಲಿ ಕೆಲಸ ಮಾಡುವ ಉದ್ಯೋಗಿ ಬಾಬಾ ಏಪ್ರಿಲ್ನಲ್ಲಿ ಸುಮಾರು 1,500 ಶವಗಳನ್ನು ದಹನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದ್ರೆ ಸರ್ಕಾರದ ಅಂಕಿ - ಅಂಶಗಳು ಇದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ಇನ್ನು ನಗರದಲ್ಲಿ ಒಟ್ಟು 9 ಶವಾಗಾರಗಳು ಇರುವುದರಿಂದ, ಸರ್ಕಾರ ನೀಡಿದ ಲೆಕ್ಕಕ್ಕಿಂತಲೂ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಈಟಿವಿ ಭಾರತ್ ತಂಡವು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರಿಗೆ ಸಾವಿನ ಸಂಖ್ಯೆಯ ಕುರಿತಾದ ಗೊಂದಲವನ್ನು ಪ್ರಶ್ನಿಸಲು ಪ್ರಯತ್ನಿಸಿದಾಗ, ಅವರು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಮಾತುಗಳೂ ಇವೆ.
ಇದನ್ನೂ ಓದಿ: ಆಕ್ಸಿಜನ್ಗಾಗಿ ಅರಳಿ ಮರದ ಕೆಳಗೆ ಮಲಗಿದ ಜನ!