ಮೈಸೂರು: ಜಿಲ್ಲೆಯಲ್ಲಿ 88 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಇದ್ದು, ಇಲ್ಲಿಯವರೆಗೆ 10 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ, ಸದ್ಯ ನಗರದ ಕೆ.ಆರ್. ಆಸ್ಪತ್ರೆಯಲ್ಲಿ 62 ಜನ ಬ್ಲ್ಯಾಕ್ ಫಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಔಷಧಿಗಳಿಗೆ ಕೊರತೆಯಿಲ್ಲ. ಮೊದಲ ಹಂತದ ಮನೆ ಮನೆ ಸರ್ವೆ 100%ರಷ್ಟು ಪೂರ್ಣಗೊಂಡಿದೆ. 2ನೇ ಹಂತದ ಸರ್ವೆ ಕಾರ್ಯ ಶೇ. 23ರಷ್ಟು ಪೂರ್ಣಗೊಂಡಿದ್ದು, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಇನ್ನೊಂದು ವಾರ 2ನೇ ಹಂತದ ಸರ್ವೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಇನ್ನೆರಡು ವಾರಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಆಗಲಿದೆ. ಈಗ 8600 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಅದರಲ್ಲಿ 6100 RTPCR ಮತ್ತು 2500 ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಲಾಗುತ್ತಿದೆ ಎಂದರು.
ಮೊದಲ ಹಂತದ ವ್ಯಾಕ್ಸಿನೇಷನ್ ಶೇ. 72.5 ಆಗಿದ್ದು, 2ನೇ ಡೋಸ್ ಶೇ. 18ರಷ್ಟಾಗಿದೆ. 3ನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುವ ದೃಷ್ಟಿಯಿಂದ ಈಗಾಗಲೇ ಕಮಿಟಿ ರಚಿಸಲಾಗಿದೆ. ಸ್ಟೇಟ್ ಕಮಿಟಿ ಎಕ್ಸ್ಪರ್ಟ್ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತೇವೆ ಎಂದು ಮಾಹಿತಿ ನೀಡಿದರು.