ತರ್ನ್ ತರನ್ (ಪಂಜಾಬ್): 11 ಸಾವಿರ ವೋಲ್ಟ್ ವಿದ್ಯುತ್ ತಂತಿ ತಗುಲಿ ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ತಮ್ಮ ಸಮಯಪ್ರಜ್ಞೆಯಿಂದ ಉಳಿಸಿಕೊಂಡಿರುವ ಅಪರೂಪದ ಘಟನೆ ಪಂಜಾಬ್ನ ತರ್ನ್ ತರನ್ ಜಿಲ್ಲೆಯಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ವ್ಯಕ್ತಿಯನ್ನು ಮಣ್ಣಿನಲ್ಲಿ ಇಡೀ ದೇಹವನ್ನು ಹೂಳುವ ಮೂಲಕ ಆತನನ್ನು ಸಾವಿನಿಂದ ಪಾರು ಮಾಡಿದ್ದಾರೆ.
ಇಲ್ಲಿನ ಬಹಾ ಬಿಂಧಿ ಚಂದ್ ಕಾಲೋನಿಯಲ್ಲಿ ಮನೆಯ ಮೇಲೆ ಹಾದು ಹೋಗಿರುವ 11 ಸಾವಿರ (11 ಕೆವಿ) ವೋಲ್ಟ್ ವಿದ್ಯುತ್ ತಂತಿ ತಗುಲಿ ನಿಶಾನ್ ಸಿಂಗ್ ಎಂಬಾತ ಗಂಭೀರ ಸ್ಥಿತಿಗೆ ತಲುಪಿದ್ದರು. ತಕ್ಷಣವೇ ಸ್ಥಳೀಯರು ತಮಗೆ ತಿಳಿದ ದೇಶಿಯ ವಿಧಾನದ ಮೂಲಕ ಆತನ ಪ್ರಾಣ ಉಳಿಸಿದ್ದಾರೆ. ವಿದ್ಯುತ್ ಶಾಕ್ನಿಂದ ನಿಶ್ಶಕ್ತಿಗೊಂಡಿದ್ದ ವ್ಯಕ್ತಿ ಇಡೀ ದೇಹವನ್ನು ಕೈಯಿಂದ ತಿಕ್ಕಿ, ಕುತ್ತಿಗೆಯವರೆಗೆ ಮಣ್ಣಿನಲ್ಲಿ ಒಂದು ಗಂಟೆ ಕಾಲ ಹೂತಿದ್ದಾರೆ. ಇದರಿಂದ ಆತ ಚೇತರಿಸಿಕೊಂಡಿದ್ದಾರೆ.
ಇಬ್ಬರು ಮಕ್ಕಳ ತಂದೆಯಾಗಿರುವ ನಿಶಾನ್ ಸಿಂಗ್ ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತೆರವು ಮಾಡುವಂತೆ ಇಂಧನ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರು. ಅಲ್ಲದೇ, 20 ದಿನಗಳ ಹಿಂದೆಯಷ್ಟೇ ಮನೆಗಳ ಮೇಲಿನ ವಿದ್ಯುತ್ ತಂತಿಗಳನ್ನು ತೆರವುಗೊಳಿಸುವಂತೆ ಶಾಸಕರು ಕೂಡ ಸೂಚಿಸಿದ್ದರು. ಆದರೆ, ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗ್ತಿದೆ.
ಇನ್ನೊಂದೆಡೆ ನಿಶಾನ್ ಸಿಂಗ್ಗೆ ವಿದ್ಯುತ್ ಶಾಕ್ ಹೊಡೆದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 11 ಕೆವಿ ವಿದ್ಯುತ್ ವೈರ್ ವ್ಯಕ್ತಿಗೆ ಸ್ಪರ್ಶಿಸಿದರೆ, ಲೈನ್ ಟ್ರಿಪ್ ಆಗುತ್ತಿತ್ತು. ಆದರೆ, ಅಂತಹ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇದೆಂಥಾ ವಿಚಿತ್ರ.. ರೈತನ ಹೊಲದಲ್ಲಿ ಏಕಾಏಕಿ ಚಿಮ್ಮಿದ ನೀರು!