ಕಾಸರಗೋಡು(ತ್ರಿಶೂರ್): ಯುವಕನೊಬ್ಬ ತನ್ನ ತಂದೆ ಹೊಡೆದು ಕೊಂದಿರುವ ಘಟನೆ ತ್ರಿಶೂರ್ ಜಿಲ್ಲೆಯ ಕೊಡನೂರಿನಲ್ಲಿ ನಿನ್ನೆ(ಶುಕ್ರವಾರ) ಸಂಜೆ 7 ಗಂಟೆಗೆ ನಡೆದಿದೆ. ಚಿರಮ್ಮಲ್ ಜಾಯ್ (60) ಕೊಲೆಯಾದವರು. ಅವರ ಪುತ್ರ ರಿಜೋ(25) ಕೊಲೆ ಆರೋಪಿ.
ಕುಡಿತದ ದಾಸನಾಗಿದ್ದ ರಿಜೋ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದನಂತೆ. ನಿನ್ನೆ ಸಹ ಮನೆಯಲ್ಲಿ ನಡೆದ ಜಗಳದ ವೇಳೆ ರಿಜೋ ಜಾಯ್ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಾಯಗೊಂಡಿದ್ದ ಜಾಯ್ ಅವರನ್ನು ತ್ರಿಶೂರ್ ಜನರಲ್ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ತಲೆ ಮತ್ತು ಮುಖಕ್ಕೆ ತೀವ್ರ ಗಾಯವಾಗಿದ್ದರಿಂದ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ರಿಜೋ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪತಿ ಹತ್ಯೆ ಮಾಡಿದ ಪತ್ನಿ ಅರೆಸ್ಟ್: ಮತ್ತೊಂದೆಡೆ ಕಾಸರಗೋಡಿನ ಪಾಣತ್ತೂರಿನಲ್ಲಿ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಆರೋಪದಡಿ ರಾಜಪುರಂ ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ನಡೆದ ಜಗಳವೇ ಕೊಲೆಗೆ ಕಾರಣ ಎನ್ನಲಾಗಿದೆ. ಪಾಣತ್ತೂರು ಮೂಲದ ಸೀಮಂತಿನಿ ಬಂಧಿತ ಆರೋಪಿ. ಇವರ ಪತಿ ಬಾಬು ವರ್ಗೀಸ್ (54) ಮೃತರು. ಶುಕ್ರವಾರ ಮನೆಯಲ್ಲಿ ವರ್ಗೀಸ್ ಮೃತದೇಹ ಚಾಕುವಿನಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕುಡಿದ ಮತ್ತಿನಲ್ಲಿದ್ದ ಬಾಬು ಬೆಳಗ್ಗೆಯಿಂದ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಬಾಬು ಅವರ ತಲೆ, ಬಲ ಕಿವಿಯ ಬಳಿ ಮತ್ತು ಕಾಲಿನ ಮೇಲೆ ಆಳವಾದ ಗಾಯಗಳಾಗಿವೆ. ಗಾಯದಿಂದ ಅತಿಯಾದ ರಕ್ತಸ್ರಾವವಾಗಿದ್ದು, ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಮೃತ ದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಪಿ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ: ಇನ್ನೊಂದು ಕಡೆ ಹಿಂದೂ ಸಂಘಟನೆ ಕಾರ್ಯಕರ್ತ ರುದ್ರೇಶ್ ಹತ್ಯೆಯ ಪ್ರಮುಖ ಆರೋಪಿ ಮೊಹಮ್ಮದ್ ಗೌಸ್ ನಯಾಝಿ (41) ಗಾಗಿ ತೀವ್ರ ಹುಡುಕಾಟ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆತನ ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ ನೀಡಲಾಗುವುದು ಎಂದು ಘೋಷಿಸಿದೆ.
2016 ರ ಅ.16ರಂದು ಬೆಳಗ್ಗೆ 9ಕ್ಕೆ ಶಿವಾಜಿನಗರದ ಕಾಮರಾಜ ರಸ್ತೆಯ ಶ್ರೀನಿವಾಸ ಮೆಡಿಕಲ್ ಸ್ಟೋರ್ ಮುಂಭಾಗದಲ್ಲಿ ಸ್ನೇಹಿತರೊಂದಿಗೆ ನಿಂತಿದ್ದ ರುದ್ರೇಶ್ ಅವರನ್ನು 2 ಬೈಕ್ ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಬಳಿಕ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನ ಆರ್‌ಟಿ ನಗರ ಎರಡನೇ ಬ್ಲಾಕ್ ನ ನಿವಾಸಿಯಾಗಿದ್ದ ಮೊಹಮ್ಮದ್ ಗೌಸ್ ನಯಾಝಿ ಅಲಿಯಾಸ್ ಗೌಸ್ ಭಾಯ್ ಎಂಬಾತನಿಗೆ ಹಲವು ವರ್ಷಗಳಿಂದ ಶೋಧ ನಡೆಸುತ್ತಿದೆ.
ಇದನ್ನೂ ಓದಿ: ರುದ್ರೇಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಮಾಹಿತಿ ನೀಡಿದವರಿಗೆ ಐದು ಲಕ್ಷ ಬಹುಮಾನ ಘೋಷಿಸಿದ ಎನ್ಐಎ