ಪಾಣಿಪತ್(ಹರಿಯಾಣ): 'ದ್ವೇಷದ ಮಾರುಕಟ್ಟೆಯಲ್ಲಿ ತಮ್ಮದು ಪ್ರೀತಿಯ ಅಂಗಡಿ' ಎಂದು ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದರು. ಈ ಯಾತ್ರೆಯನ್ನು ನೀವು ಯಾಕೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದ ಬಿಜೆಪಿ ನಾಯಕರಿಗೆ ಅವರು ಈ ರೀತಿ ಉತ್ತರಿಸಿದ್ದರು. ರಾಹುಲ್ ಗಾಂಧಿಯವರ ಈ ಘೋಷಣೆಯಿಂದ ಪ್ರೇರಣೆಗೊಂಡ ಹರಿಯಾಣ ಮೂಲಕ ಯುವಕನೊಬ್ಬ ತಮ್ಮ ಅಂಗಡಿಯ ಮುಂದೆ ಇದೇ ಘೋಷಣೆಯುಳ್ಳ ಬೋರ್ಡ್ ಅಳವಡಿಸಿದ್ದಾನೆ. ಪಾಣಿಪಾತ್ನ ಗೋಹನ್ ರಸ್ತೆಯಲ್ಲಿ ಬಟ್ಟೆ ಅಂಗಡಿ ತೆರೆದಿರುವ ಈತ, ಅಂಗಡಿಯ ಹೊರಗೆ ರಾಹುಲ್ ಗಾಂಧಿ ಭಾವಚಿತ್ರದ ಬೋರ್ಡ್ ಕೂಡ ಹಾಕಿದ್ದು, ಮೊಹಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಎಂದು ಬರೆದಿದ್ದು, ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ.
ಈ ವಿಚಾರವಾಗಿ ಅಂಗಡಿ ಮಾಲೀಕ ಮೋನು ಅವರು ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ಮಾತನಾಡಿದ್ದು, 'ನಾನು ಭಾರತೀಯ ರಾಷ್ಟ್ರೀಯ ಲೋಕ್ ದಳ ಪಕ್ಷದೊಂದಿಗೆ ದೀರ್ಘ ಸಂಬಂಧ ಹೊಂದಿದ್ದೇನೆ. ಸದಾ ಆ ಪಕ್ಷವನ್ನು ಬೆಂಬಲಿಸಿಯೇ ಮತ ಹಾಕಿದ್ದಾನೆ. ಆದರೆ, ಈಗ ರಾಹುಲ್ ಗಾಂಧಿಯಿಂದ ಪ್ರೇರಣೆಗೊಂಡಿದ್ದೇನೆ. ನನ್ನ ಅಂಗಡಿಯ ಹೊರಗೆ ಮೊಹಬತ್ ಕಿ ದುಕಾನ್ ಎಂದು ಬೋರ್ಡ್ ಹಾಕಿರುವೆ. ಅಂಗಡಿಯಲ್ಲಿ ಬಟ್ಟೆ ಮಾರಾಟದ ಜೊತೆಗೆ ಜನರೊಂದಿಗೆ ಪ್ರೀತಿಯನ್ನೂ ಹಂಚುತ್ತಿದ್ದೇನೆ' ಎಂದರು.
ವೈರಲ್ ಆಯ್ತು ವಿಶೇಷ ಬೋರ್ಡ್: ಮೂರು ದಿನಗಳ ಹಿಂದೆ ಈ ಬೋರ್ಡ್ ಅಳವಡಿಸಲಾಗಿದೆ. ಅಂಗಡಿಯ ಫೋಟೋವನ್ನು ಯಾರೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್ ಆಗಿದೆ. 'ನನಗೀಗ ದೇಶಾದ್ಯಂತ ಸಂದೇಶಗಳು ಬರುತ್ತಿವೆ. ಬೋರ್ಡ್ ಗಮನಿಸಿದ ಅನೇಕರು ನನ್ನ ನೋಡಿ ಮುಗುಳ್ನಗುತ್ತಾರೆ. ಇದು ಸಂತಸ ಮೂಡಿಸಿದೆ' ಎಂದು ಹೇಳಿದ್ದಾರೆ.
'ರಾಜ್ಯದಲ್ಲಿ ನಾನು ಐಎನ್ಎಲ್ಡಿ ಪಕ್ಷಕ್ಕೆ ಮಾತ್ರ ಮತ ಚಲಾಯಿಸುತ್ತೇನೆ. ರಾಷ್ಟ್ರದ ವಿಷಯಕ್ಕೆ ಬಂದರೆ, ರಾಹುಲ್ ಗಾಂಧಿಯಿಂದ ಸ್ಫೂರ್ತಿ ಪಡೆದಿದ್ದೇನೆ. ಪ್ರಸ್ತುತ ಕೇಂದ್ರದಲ್ಲಿ ಆಡಳಿತಲ್ಲಿರುವ ಬಿಜೆಪಿ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಸದಾ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟು ಮಾಡುತ್ತದೆ. ಇದರ ಮಧ್ಯೆ, ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದ್ವೇಷ ಮಾರುಕಟ್ಟೆಯಲ್ಲಿ ತಾವು ಪ್ರೀತಿಯನ್ನು ಹಂಚಲು ಮುಂದಾಗುತ್ತಿದ್ದೇವೆ. ಅವರು ದ್ವೇಷ ಹರಡಿದ್ದಾರೆ. ನಾವು ಪ್ರೀತಿ ಹಂಚುತ್ತೇವೆ ಎಂದಿದ್ದರು. ಅವರ ಈ ಹೇಳಿಗೆ ನನಗೆ ಹೃದಯಕ್ಕೆ ನಾಟಿತು. ಇದರಿಂದ ನಾನು ಪ್ರಭಾವಿತನಾದೆ' ಎಂದು ಮೋನು ಹೇಳುತ್ತಾರೆ.
ರಾಹುಲ್ ಗಾಂಧಿ ಹೇಳದ್ದೇನು?: ಇದು ಕೇವಲ ನನ್ನ ಅಂಗಡಿಯಲ್ಲ, ಇದು ಇಡೀ ಸಂಘಟನೆಯ ಅಂಗಡಿಯಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧಿ, ನೆಹರು, ಪಟೇಲ್, ಅಂಬೇಡ್ಕರ್, ಆಜಾದ್ ಎಲ್ಲರೂ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಗಳನ್ನು ತೆರೆದಿದ್ದರು. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯವಂತೆ ನಾನು ಬಿಜೆಪಿ ನಾಯಕರಿಗೂ ವಿನಂತಿಸುತ್ತೇನೆ. ನಮ್ಮ ಧರ್ಮ, ನಮ್ಮ ದೇಶ ಪ್ರೀತಿಯಿಂದ ನಿರ್ಮಾಣವಾಗಿದೆಯೇ ಹೊರತು ದ್ವೇಷದಿಂದಲ್ಲ ಅನ್ನೋದು ರಾಹುಲ್ ಗಾಂಧಿ ಹೇಳಿಕೆಯಾಗಿತ್ತು.
ಭಾರತ್ ಜೋಡೋ ಯಾತ್ರೆಯ ಕುರಿತು..: ಕಳೆದ ನವೆಂಬರ್ನಲ್ಲಿ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆ 10 ರಾಜ್ಯಗಳಲ್ಲಿ 49 ಜಿಲ್ಲೆಗಳಲ್ಲಿ ಸಾಗಿದೆ. ಹರಿಯಾಣದಲ್ಲಿ ಎರಡನೇ ಹಂತದ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಮಂಗಳವಾರ ಅಂಬಾಲ ಜಿಲ್ಲೆಯಲ್ಲಿ ಯಾತ್ರೆ ಸಾಗಿದ್ದು, ಇಂದು ಪಂಜಾಬ್ ಪ್ರವೇಶಿಸಲಿದ್ದಾರೆ.
ಇದನ್ನೂ ಓದಿ: ಆರ್‌ಎಸ್‌ಎಸ್ 21ನೇ ಶತಮಾನದ ಕೌರವರು: ರಾಹುಲ್ ಗಾಂಧಿ