ಅನಂತಪುರಂ(ಆಂಧ್ರ ಪ್ರದೇಶ): ನೂರೊಂದು ಆಸೆಯನ್ನು ಹೊತ್ತು ಕೆಲ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿದೇಶದಲ್ಲಿ ನೆಲೆಸಿದ್ದ ಜೋಡಿಯ ಜೀವನದಲ್ಲಿ ವಿಧಿ ಆಟವಾಡಿದೆ. 20 ದಿನಗಳ ಹಿಂದೆ ಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದ ಸಾಫ್ಟ್ವೇರ್ ಎನ್ಆರ್ಐ ನವದಂಪತಿ ರಸ್ತೆ ಅಪಘಾತದಲ್ಲಿ ಉಸಿರು ಚೆಲ್ಲಿದ್ದಾರೆ.
ಜೂನ್ 19ರಂದು ಮದುವೆಯಾಗಿತ್ತು:
ಆಂಧ್ರಪ್ರದೇಶದ ಅನಂತಪುರಂ ನಿವಾಸಿ ವಿಷ್ಣುವರ್ಧನ್ (28) ಮತ್ತು ಕಡಪ ನಿವಾಸಿ ಕುಲ್ವ ಕೀರ್ತಿ (25) ಉನ್ನತ ಮಟ್ಟದ ವ್ಯಾಸಂಗ ಮಾಡಿದ್ದಾರೆ. ಇವರಿಬ್ಬರು ಅಮೆರಿಕದಲ್ಲಿ ಉದ್ಯೋಗವನ್ನು ಸಹ ಗಿಟ್ಟಿಸಿಕೊಂಡಿದ್ದಾರೆ. ಅಲ್ಲೇ ಜೀವಿಸಬೇಕೆಂದು ನಿರ್ಧರಿಸಿದ್ದ ಈ ಯುವ ಜೋಡಿ, ಜೂನ್ 19ರಂದು ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಂಡಿದ್ದರು.
ಬೆಂಗಳೂರಿನಿಂದ ವಾಪಸ್ಸಾಗುವಾಗ ಅಪಘಾತ:
ಎರಡು ದಿನಗಳ ಹಿಂದೆ ವಿಷ್ಣುವರ್ಧನ್ ಮತ್ತು ಕೀರ್ತಿ ಬೆಂಗಳೂರಿನಲ್ಲಿರುವ ಬಂಧುಗಳ ಮನೆಗೆ ತೆರಳಿದ್ದರು. ಬುಧವಾರ ಕಾರಿನಲ್ಲಿ ಬೆಂಗಳೂರಿನಿಂದ ಅನಂತಪುರಕ್ಕೆ ಹಿಂದಿರುಗುತ್ತಿದ್ದ ಸಮಯದಲ್ಲಿ ಬೊಮ್ಮಪರ್ತಿ ಗ್ರಾಮದ ಬಳಿ ಬೈಕ್ವೊಂದು ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋದಾಗ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಕಂಟೈನರ್ಗೆ ಗುದ್ದಿದೆ. ಬಳಿಕ ರಸ್ತೆ ಪಕ್ಕದ ಗುಂಡಿಗೆ ಉರುಳಿದೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ವಿಷ್ಣುವರ್ಧನ್ ಮತ್ತು ಕೀರ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದರು. ಅಷ್ಟೊತ್ತಿಗಾಗಲೇ ಕೀರ್ತಿ ಪ್ರಾಣಪಕ್ಷಿ ಹಾರಿಹೋಗಿತ್ತು. ವಿಷ್ಣುವರ್ಧನ್ ಸ್ಥಿತಿ ಚಿಂತಾಜನಕವಾಗಿತ್ತು. ಆಗ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವಿಷ್ಣುವರ್ಧನ್ ಸಹ ಮೃತಪಟ್ಟರು.
ಈ ಘಟನೆ ಕುರಿತು ರಾಪ್ತಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿಷ್ಣುವರ್ಧನ್ ತಂದೆ ಸುಧಾಕರ್ ನಾಯ್ಡು ಸಹಾಯಕ ರಿಜಿಸ್ಟ್ರಾರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೀರ್ತಿ ತಂದೆ ಕಡಪದಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಡಿಇ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿ ಈ ತಿಂಗಳ 25ರಂದು ಅಮೆರಿಕಕ್ಕೆ ವಾಪಸಾಗಲು ಟಿಕೆಟ್ ಸಹ ಬುಕ್ ಮಾಡಿದ್ದರು. ಆದ್ರೆ ವಿಧಿ ಅಷ್ಟರಲ್ಲೇ ಅವರ ಜೀವನದಲ್ಲಿ ಆಟವಾಡಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.