ಲಖನೌ: ಉತ್ತರಪ್ರದೇಶದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಯೋಗಿ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ 10 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲು ಯೋಜಿಸಿದೆ.
ಸರ್ಕಾರವು ಈವರೆಗೆ ‘ಒಂದು ಹನಿ ಮಳೆ ನೀರಿನ ಸಂಗ್ರಹ- ಹೆಚ್ಚು ಬೆಳೆ’ (ಪರ್ ಡ್ರಾಪ್ ಮೋರ್ ಕ್ರಾಪ್) ಎಂಬ ಯೋಜನೆಯಡಿ 4,400 ಕೃಷಿ ಹೊಂಡಗಳನ್ನು ನಿರ್ಮಿಸಿದೆ. ಇವುಗಳಲ್ಲಿ ಹೆಚ್ಚಾಗಿ ಬುಂದೇಲ್‌ಖಂಡ್ ಮತ್ತು ವಿಂಧ್ಯ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ.
ರಾಜ್ಯ ಸರ್ಕಾರವು ನೀರಾವರಿ ಮತ್ತು ಖೇತ್ ತಲಾಬ್ ಯೋಜನೆ ಮೂಲಕ ಪ್ರತಿ ಹನಿ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸರ್ಕಾರದ ವಕ್ತಾರರೊಬ್ಬರು ಹೇಳಿದ್ದಾರೆ.
ಈ ಹೊಂಡಗಳ ಜಿಯೋ-ಟ್ಯಾಗಿಂಗ್ ಜೊತೆಗೆ, ಶೇ .50 ರಷ್ಟು ಸಬ್ಸಿಡಿಯನ್ನು ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುತ್ತದೆ. ಮಳೆಗಾಲದಲ್ಲಿ ಈ ಹೊಂಡಗಳಲ್ಲಿ ಸಂಗ್ರಹಿಸಿದ ನೀರನ್ನು ಜಾನುವಾರುಗಳಿಗಾಗಿ ಬಳಸಲಾಗುತ್ತದೆ.
ಯೋಗಿ ಸರ್ಕಾರವು ಮಸ್ಗಾಂವ್ ಚಿಲ್ಲಿ (ಹಮೀರ್‌ಪುರ್), ಕುಲ್ಪಹಾರ್ (ಮಹೋಬಾ) ಮತ್ತು ಶಹಜಾದ್ (ಲಲಿತ್‌ಪುರ) ಯೋಜನೆಗಳು ಒಳಗೊಂಡಂತೆ ಮೂರು ನೀರಾವರಿ ಯೋಜನೆಗಳ ಕಾಮಗಾರಿಗಳು ಈ ವರ್ಷದ ಅಂತ್ಯದಲ್ಲಿ ಮುಗಿಯಲಿವೆ.
ಈ ವರ್ಷ ಪೂರ್ಣಗೊಳ್ಳಲಿರುವ ಅರ್ಜುನ್ ಸಹಾಯಕ್ ಕಾಲುವೆ ಯೋಜನೆಯು ಬಂಡಾ, ಹಮೀರ್‌ಪುರ್ ಮತ್ತು ಮಹೋಬಾದ 44,381 ಹೆಕ್ಟೇರ್ ಭೂಮಿಗೆ ನೀರು ಪೂರೈಸುತ್ತದೆ. ಅಲ್ಲದೆ, ಜನರಿಗೆ ಕುಡಿಯುವ ನೀರು ಪೂರೈಸುತ್ತದೆ.