ರಾಂಚಿ : ಕುಸ್ತಿ ಚಾಂಪಿಯನ್‌ಶಿಪ್ ಕಾರ್ಯಕ್ರಮದಲ್ಲಿ ಕುಸ್ತಿ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಯುವ ಕುಸ್ತಿಪಟುವಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ಕುರಿತಂತೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ರಾಂಚಿಯ ಖೇಲ್ ವಿಲೇಜ್‌ನಲ್ಲಿರುವ ಮೆಗಾ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ 15 ವರ್ಷದೊಳಗಿನ ಕುಸ್ತಿಪಟುಗಳಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 800ಕ್ಕೂ ಅಧಿಕ ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಅದರಂತೆ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ತರಪ್ರದೇಶದಿಂದ ಯುವ ಕುಸ್ತಿಪಟು ಕೂಡ ಆಗಮಿಸಿದ್ದನು.
ವಯೋಮಿತಿ ಪರಿಶೀಲನೆ ವೇಳೆ ಯುವ ಕುಸ್ತಿಪಟುವಿನ ವಯಸ್ಸು 15 ವರ್ಷಕ್ಕಿಂತ ಮೇಲ್ಪಟ್ಟಿದ್ದು, ತಾಂತ್ರಿಕ ಕಾರಣಗಳಿಂದಾಗಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಯಿತು. ಇಷ್ಟಕ್ಕೆ ಸಮ್ಮನಾಗದ ಕ್ರೀಡಾಪಟು ಅಧಿಕಾರಿಗಳೊಂದಿಗೆ ಗಂಟೆಗಳ ಕಾಲ ವಾಗ್ವಾದ ನಡೆಸಿ ನಂತರ ನೇರವಾಗಿ ವೇದಿಕೆ ಮೇಲೆ ಹೋಗಿ ಕುಸ್ತಿ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬಳಿ ಟೂರ್ನಿಯಲ್ಲಿ ಭಾಗಹಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದನು.
ಈ ವೇಳೆ ಯುವ ಕ್ರೀಡಾಪಟು ಅಧ್ಯಕ್ಷರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಯುವ ಕ್ರೀಡಾಪಟು ಅವಾಚ್ಯ ಶಬ್ದಗಳನ್ನು ಬಳಸಿದ್ದಲ್ಲದೆ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಪರಿಸ್ಥಿತಿಯನ್ನು ನಿಭಾಯಿಸಲು ಅಧ್ಯಕ್ಷರು ಯುವ ಕ್ರೀಡಾಪಟುವಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗುತ್ತಿದೆ.
'ಯುವ ಕುಸ್ತಿಪಟು ನಿರಂತರವಾಗಿ ಅನುಚಿತವಾಗಿ ವರ್ತಿಸುತ್ತಿದ್ದನು. ಕಾರ್ಯಕ್ರಮದ ನಂತರ ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದು ಹಲವು ಬಾರಿ ಹೇಳಿದರೂ ಆತ ಒಪ್ಪಲಿಲ್ಲ. ಆಗ ಬಲವಂತವಾಗಿ ಕಪಾಳಮೋಕ್ಷ ಮಾಡಬೇಕಾಯಿತು. ಕುಸ್ತಿ ಸಂಘವು ಯಾವತ್ತೂ ಅಶಿಸ್ತನ್ನು ಸಹಿಸುವುದಿಲ್ಲ.
ಪೋಷಕನಾಗಿ ವಿವರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿತಾದರೂ ಯುವಕ ಒಪ್ಪಲಿಲ್ಲ' ಎಂದು ವಿಷಯಕ್ಕೆ ಸಂಬಂಧಿಸಿದಂತೆ ಬ್ರಿಜ್ ಭೂಷಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಘಟನೆ ಈಗ ರಾಜಕೀಯ ವಯಲದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಅಧ್ಯಕ್ಷರ ರಾಜೀನಾಮೆ ಕೊಡುವಂತೆ ಆಗ್ರಹಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ ಆರೋಪ : ಓರ್ವ ವ್ಯಕ್ತಿಯ ಹತ್ಯೆ ಶಂಕೆ