ನವದೆಹಲಿ: ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಇದೀಗ ತಿಹಾರ್ ಜೈಲು ಸಂಕೀರ್ಣದಲ್ಲಿ ಕೈದಿಗಳಿಗೆ ಕುಸ್ತಿ ತರಬೇತಿ ನೀಡುತ್ತಿದ್ದಾರೆ.
ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿದ್ದ ಸಾಗರ್ ಧಂಕರ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪ್ರಸ್ತುತ ತಿಹಾರ್‌ನ ಜೈಲು ಸಂಖ್ಯೆ 2ರಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್ ಈಗ ಸಹ ಕೈದಿಗಳಿಗೆ ಕುಸ್ತಿ ತರಬೇತಿ ನೀಡುತ್ತಿದ್ದಾರೆ ಎಂದು ಜೈಲು ಅಧಿಕಾರಿಯೊಬ್ಬರು ಮಾಹಿತಿ ಹೊರಹಾಕಿದ್ದಾರೆ.
ಮತ್ತೋರ್ವ ಜೈಲು ಅಧಿಕಾರಿಯೊಬ್ಬರು ಕೆಲ ಮಾಹಿತಿ ನೀಡಿದ್ದು, ಆಸಕ್ತಿ ಹೊಂದಿರುವ ಐದರಿಂದ ಆರು ಕೈದಿಗಳಿಗೆ ತರಬೇತಿ ನೀಡಲು ಸುಶೀಲ್ ಕುಮಾರ್‌ಗೆ ಅನುಮತಿ ನೀಡಲಾಗಿದೆ. ಈ ತರಬೇತಿ ವಾರದ ಹಿಂದೆ ಪ್ರಾರಂಭವಾಗಿದೆ ಎಂದು ಹೇಳಿದರು.
ತರಬೇತಿ ನೀಡುವ ವಿಚಾರ ಜೈಲು ಅಧಿಕಾರಿಗಳ ನಿರ್ಧಾರ. ಅವರ ಕುಸ್ತಿ ಕೌಶಲ್ಯವನ್ನು ಇತರರಿಗೆ ಕಲಿಸಲು ನಾವು ಬಯಸಿದ್ದೇವೆ. ನಾವು ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ಅವರು ನಮ್ಮ ಪ್ರಸ್ತಾಪಕ್ಕೆ ಒಪ್ಪಿದರು. ಅವರು ಸಹ ತರಬೇತಿ ನೀಡುವ ಇಚ್ಛೆ ತೋರಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: ಅಯ್ಯರ್ ಉತ್ತಮವಾಗಿ ಆಡಿದ್ದಾರೆ, ಆದ್ರೆ ರಹಾನೆ-ಪೂಜಾರ ಸ್ಥಾನ ತುಂಬಲು ಇನ್ನೂ ಶ್ರಮಿಸಬೇಕು: ರೋಹಿತ್
ಕುಸ್ತಿ ತರಬೇತಿ ನೀಡಲು ಸುಶೀಲ್ ಕುಮಾರ್‌ಗೆ ಸಂಭಾವನೆ ನೀಡಲಾಗುತ್ತದೆಯೇ ಇಲ್ಲವೇ ಎಂಬುದನ್ನು ಜೈಲು ಅಧಿಕಾರಿಗಳು ಖಚಿತಪಡಿಸಿಲ್ಲ. ಆದರೆ ಅವರು ನೀಡುತ್ತಿರುವ ತರಬೇತಿಯನ್ನು ಕೂಲಿ/ ವೇತನ ಎಂದು ಪರಿಗಣಿಸಲಾಗುವುದು ಮತ್ತು ಭವಿಷ್ಯದಲ್ಲಿ ಅದನ್ನು ಪಾವತಿಯ ಬಗ್ಗೆ ನಿರ್ಧರಿಸಲಾಗುವುದು ಎಂದು ಜೈಲು ಮೂಲಗಳು ತಿಳಿಸಿವೆ.
ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಪ್ರಕರಣದಲ್ಲಿ ಪೊಲೀಸರು 18 ಜನರನ್ನು ಬಂಧಿಸಿದ್ದಾರೆ. ಸುಶೀಲ್ ಕುಮಾರ್ ಮತ್ತು ಇತರರ ವಿರುದ್ಧ ಕ್ರೈಂ ಬ್ರಾಂಚ್ ರೋಹಿಣಿ ನ್ಯಾಯಾಲಯಕ್ಕೆ ಎರಡು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ.