ಮಣಿಪುರ: ಭಾರತೀಯ ರೈಲ್ವೆ ಇಲಾಖೆಯು 111 ಕಿ.ಮೀ ಉದ್ದದ ಜಿರಿಬಾಮ್-ಇಂಫಾಲ್ ರೈಲ್ವೆ ಯೋಜನೆಯ ಭಾಗವಾಗಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ವಿಶ್ವದ ಅತಿ ಎತ್ತರದ ಸೇತುವೆಯ ಕಂಬವನ್ನು ನಿರ್ಮಿಸುತ್ತಿದೆ.
ಪ್ರಪಂಚದಲ್ಲಿಯೇ ಅತಿ ಎತ್ತರದ ರೈಲು ಸೇತುವೆ ನಿರ್ಮಾಣ ಕಾರ್ಯವನ್ನು ಈಶಾನ್ಯ ಗಡಿ ರೈಲ್ವೆ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿದೆ. ಮಣಿಪುರದ ತಾಮೆಂಗ್‌ಲಾಂಗ್ ಜಿಲ್ಲೆಯ ನೋನಿ ಗ್ರಾಮದಲ್ಲಿ ಉದ್ದೇಶಿತ ರೈಲು ಸೇತುವೆಗೆ 141 ಮೀ (462 ಅಡಿ) ಎತ್ತರದ ಕಂಬಗಳನ್ನು ಕಾಮಗಾರಿ ನಡೆಯುತ್ತಿದೆ. ಇದು ಪ್ರಪಂಚದಲ್ಲಿಯೇ ರೈಲು ಸೇತುವೆಗಾಗಿ ಸಿದ್ಧಗೊಳ್ಳುತ್ತಿರುವ ಅತಿ ಎತ್ತರದ ಕಂಬವಾಗಿದೆ.
ಈ ಸೇತುವೆಯ ಕಂಬವು ಯುರೋಪಿನ ಮಾಂಟೆನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್ ಬ್ರಿಡ್ಜ್‌ನ ಎತ್ತರದ ದಾಖಲೆಯನ್ನು ಮೀರಿಸುತ್ತಿದೆ. ಮಾಂಟೆನೆಗ್ರೊದ ಮಾಲಾ- ರಿಜೆಕಾ ವಯಾಡಕ್ಟ್ ಪಿಯರ್ ಬ್ರಿಡ್ಜ್‌ನ ಎತ್ತರ 139 ಮೀಟರ್ ಇದೆ.
ಈಗಾಗಲೇ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದೆ. ಎರಡನೇ ಹಂತದ ಕೆಲಸ ಸುಮಾರು 98 ಪ್ರತಿಶತದಷ್ಟು ಪೂರ್ಣಗೊಂಡಿದೆ. ಫೆಬ್ರವರಿ 2022ರ ವೇಳೆಗೆ ಅದೂ ಸಹ ಮುಕ್ತಾಯವಾಗಲಿದೆ. ಮೂರನೇ ಹಂತವು ನವೆಂಬರ್ 2022 ರೊಳಗೆ ಪೂರ್ಣಗೊಳ್ಳಲಿದೆ. ಪುಲ್‌ನಿಂದ ಇಂಫಾಲ್ ಕಣಿವೆಯವರೆಗೆ ಸೇತುವೆ ವಿಸ್ತರಿಸಿರುವ ನಾಲ್ಕನೇ ಮತ್ತು ಕೊನೆಯ ಹಂತದ ಕಾರ್ಯ ಡಿಸೆಂಬರ್ 2023 ವೇಳೆಗೆ ಮುಗಿಯಲಿದೆ ಎಂದು ಯೋಜನೆಯ ಮುಖ್ಯ ಇಂಜಿನಿಯರ್ ಸಂದೀಪ್ ಶರ್ಮಾ ತಿಳಿಸಿದ್ದಾರೆ.
111 ಕಿ. ಮೀ ಉದ್ದದ ಈ ರೈಲ್ವೆ ಮಾರ್ಗ ಒಟ್ಟು 61ರಷ್ಟು ಸುರಂಗಗಳನ್ನು ಒಳಗೊಂಡಿದೆ. ಸೇತುವೆಯ ಒಟ್ಟು ಅಂದಾಜು ವೆಚ್ಚ 374 ಕೋಟಿ ರೂಪಾಯಿಗಳಾಗಿದೆ. ಮಳೆಗಾಲದಲ್ಲಿ ಎನ್‌ಹೆಚ್ -37ನಲ್ಲಿ ಭೂಕುಸಿತಗಳು ಹೆಚ್ಚಾಗಿ ಸಂಭವಿಸುತ್ತವೆ. ಜೊತೆಗೆ, ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಇಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತದೆ. ಆ ಸಮಯದಲ್ಲಿ ಕೆಲಸ ಮಾಡುವುದು ಕಷ್ಟ ಎಂದು ಸೇತುವೆ ನಿರ್ಮಾಣದ ವೇಳೆ ಉಂಟಾಗುವ ಅಡೆತಡೆಗಳ ಕುರಿತು ಅವರು ವಿವರಿಸಿದರು.