ಶ್ರೀನಗರ: ಪತಿ ಸಾವನ್ನಪ್ಪಿದ್ದ ನಂತರ ನನಗೆ ಅಳಿಯಂದಿರು ಚಿತ್ರಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ನ್ಯಾಯಾಲಯದ ಮೊರೆ ಹೋದ ಘಟನೆ ಕಂಡು ಬಂದಿದೆ.
ಶ್ರೀನಗರದ ಲಾಲ್ ಬಜಾರ್ ಪ್ರದೇಶದ ನಿವಾಸಿ ಗುಲ್ಶನ್ ಇರ್ಫಾನ್ ಷಾ (35) ಅವರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ಈ ಟಿವಿ ಭಾರತದೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಪತಿ ಕ್ಯಾನ್ಸರ್ನಿಂದಾಗಿ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಸಾವನ್ನಪ್ಪಿದ್ದು, ನನಗೆ ಎರಡು ಮಕ್ಕಳಿದ್ದಾರೆ. ನನ್ನ ಅಳಿಯಂದಿರು ನನಗೆ ಮತ್ತು ನನ್ನ ಮಕ್ಕಳಿಗೆ ಹೊಡೆಯುವುದು ಸೇರಿದಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಈ ಕುರಿತು ದೂರು ನೀಡಿದ್ದು, ಪ್ರಕರಣವು ನ್ಯಾಯಾಲಯದಲ್ಲಿದೆ. ಆದರೆ, ಇದುವರೆಗೂ ಈ ಕುರಿತು ಯಾವುದೇ ವಿಚಾರಣೆಯಾಗಿಲ್ಲ. ಮೊದಲ ವಿಚಾರಣೆ ಸಮಯದಲ್ಲಿ ಅವರ ಪರವಾದ ವಕೀಲರು ಗೈರು ಹಾಜರಾಗಿದ್ದರು. ಎರಡನೇ ಸಮಯದಲ್ಲಿ ನನ್ನ ಪರವಾದ ವಕೀಲರು ತಡವಾಗಿ ಬಂದರು ಮತ್ತು ಮೂರನೇ ವಿಚಾರಣೆ ವೇಳೆ ನ್ಯಾಯಾಧೀಶರು ರಜೆಯಲ್ಲಿದ್ದರು. ಮಹಿಳಾ ಆಯೋಗ ಇದ್ದಿದ್ದರೆ ನನಗೆ ಬೇಗ ನ್ಯಾಯ ಸಿಗುತ್ತಿತ್ತು. ಆದರೆ, ಈಗ ನ್ಯಾಯಾಲಯಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳಾ ಆಯೋಗವನ್ನು ರದ್ದುಗೊಳಿಸಲಾಗಿದ್ದು, ಇದರಿಂದಾಗಿ ಸಾಕಷ್ಟು ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಮ್ಮನ್ನು ಸಂಪರ್ಕಿಸಿದಾಗಲೆಲ್ಲಾ ನಾವು ನ್ಯಾಯಾಲಯಕ್ಕೆ ಹೋಗುವಂತೆ ಅವರಿಗೆ ಸಲಹೆ ನೀಡುತ್ತಿದ್ದೇವೆ. ಆದರೆ, ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಕೆಲ ಮಹಿಳೆಯರು ಹಿಂಜರಿಯುತ್ತಾರೆ ಎಂದು ವಕೀಲೆ ಫಿಜಾ ಫಿರ್ದೌಸ್ ಹೇಳಿದ್ದಾರೆ.