ನವದೆಹಲಿ : ದೇಶದ ಒಟ್ಟಾರೆ ಉತ್ಪಾದಕತೆ ಹೆಚ್ಚಿಸಲು ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ನೀಡಿದ ಸಲಹೆಯು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದೆ. ಇತರ ದೇಶಗಳೊಂದಿಗೆ ಸ್ಪರ್ಧಿಸಲು ಭಾರತವು ತನ್ನ ಕೆಲಸದ ಸಂಸ್ಕೃತಿಯನ್ನು ಸುಧಾರಿಸುವ ಅಗತ್ಯವಿದೆ ಎಂದು ವಾದಿಸುವ ಕೆಲವರು ಮೂರ್ತಿ ಅವರ ದೃಷ್ಟಿಕೋನವನ್ನು ಬೆಂಬಲಿಸಿದರೆ, ಇನ್ನೂ ಅನೇಕರು ಅವರನ್ನು ಕಟುವಾಗಿ ಟೀಕಿಸಿದ್ದಾರೆ.
ಸದ್ಯ ಇದೇ ವಿಚಾರದ ಬಗ್ಗೆ ಮಾತನಾಡಿರುವ ಎಡೆಲ್ವೆಸ್ ಮ್ಯೂಚುವಲ್ ಫಂಡ್ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ ಈ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಭಾರತ ಕಟ್ಟಲು ಮತ್ತು ಭವಿಷ್ಯದ ಪೀಳಿಗೆಗಾಗಿ ಹಲವಾರು ಭಾರತೀಯ ಹೆಣ್ಣು ಮಕ್ಕಳು ದಶಕಗಳಿಂದಲೂ ವಾರಕ್ಕೆ 70 ತಾಸಿಗಿಂತಲೂ ಹೆಚ್ಚು ದುಡಿಮೆ ಮಾಡುತ್ತಿದ್ದಾರೆ ಎಂದು ರಾಧಿಕಾ ಹೇಳಿದ್ದಾರೆ.
"ಕಚೇರಿಗಳು ಮತ್ತು ಮನೆಗಳ ಕೆಲಸದ ಮಧ್ಯೆ ಅನೇಕ ಭಾರತೀಯ ಮಹಿಳೆಯರು ಭಾರತವನ್ನು ನಿರ್ಮಿಸಲು ಮತ್ತು ಮುಂದಿನ ಪೀಳಿಗೆಯ ಭಾರತೀಯರಿಗಾಗಿ ಎಪ್ಪತ್ತು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದಾರೆ. ವರ್ಷಗಳು ಮತ್ತು ದಶಕಗಳಿಂದ ಅವರು ಹೀಗೆ ಮುಗುಳ್ನಗೆಯೊಂದಿಗೆ ಕೆಲಸ ಮಾಡುತ್ತಿದ್ದರೂ ಯಾವತ್ತಿಗೂ ಓವರ್ಟೈಮ್ ಸಂಬಳಕ್ಕೆ ಬೇಡಿಕೆ ಇಟ್ಟಿಲ್ಲ" ಎಂದು ಗುಪ್ತಾ ಭಾನುವಾರ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬರೆದಿದ್ದಾರೆ. "ತಮಾಷೆ ಎಂದರೆ, ಟ್ವಿಟರ್ನಲ್ಲಿ ಯಾರೂ ನಮ್ಮ ಬಗ್ಗೆ ಚರ್ಚಿಸಿಲ್ಲ" ಎಂದು ಅವರು ಹೇಳಿದ್ದಾರೆ.
ಗುಪ್ತಾ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳ ಪ್ರವಾಹವನ್ನೇ ಹುಟ್ಟುಹಾಕಿದೆ. ಹಲವಾರು ಬಳಕೆದಾರರು ಇದಕ್ಕೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
"ಪೂರ್ಣವಾಗಿ ಒಪ್ಪುತ್ತೇನೆ.. ನಾನು ಅಂತಹ ಓರ್ವ ಮಹಿಳೆಯನ್ನು ಮದುವೆಯಾಗಿದ್ದೇನೆ. ನಮಗೆ ಮಗ ಹುಟ್ಟಿದಾಗಿನಿಂದಲೂ ಕಳೆದ 18+ ವರ್ಷಗಳಿಂದ ಆಕೆ ಇವೆಲ್ಲವನ್ನೂ ನಿರ್ವಹಿಸುತ್ತಿದ್ದಾರೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
"ಬಹಳ ನಿಜ. ಮನೆಯ ಕೆಲಸಗಳೊಂದಿಗೆ ಮಹಿಳೆಯರು ವಾರಕ್ಕೆ 70 ತಾಸು ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಮನೆಕೆಲಸದಿಂದ ವಾರಾಂತ್ಯದ ರಜೆ ಸಿಗುವುದಿಲ್ಲ. ಆದ್ದರಿಂದ ಅವರಿಗೆ ಬಿಡುವು ಅಥವಾ ಸ್ವಯಂ ಆರೈಕೆ ಇಲ್ಲ" ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಏತನ್ಮಧ್ಯೆ, ಭಾರತ್ಪೇ ಮಾಜಿ ಸಹ - ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ನಾರಾಯಣ ಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮಾಡಿದ ಕೆಲಸವನ್ನು ಅದರ ಫಲಿತಾಂಶಕ್ಕಿಂತ ಹೆಚ್ಚಾಗಿ ಗಂಟೆಗಳ ಆಧಾರದ ಮೇಲೆ ನೋಡಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ವಾರಕ್ಕೆ 70 ತಾಸು ಕೆಲಸ: ಪರ-ವಿರೋಧ ಚರ್ಚೆ ಹುಟ್ಟು ಹಾಕಿದ ಇನ್ಫೊಸಿಸ್ ಮೂರ್ತಿ ಹೇಳಿಕೆ