ಪಾಟ್ನಾ: ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ನಂತರ, ಆಕೆಯನ್ನ ವಿದ್ಯುತ್ ಕಂಬಕ್ಕೆ ನೇತು ಹಾಕಿರುವ ಪ್ರಕರಣ ನಡೆದಿದೆ.
ಸಮಸ್ತಿಪುರ ಜಿಲ್ಲೆಯ ವಿಭೂತಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಶೌಚಕ್ಕಾಗಿ ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಮಹಿಳೆಗೆ ಕಿರುಕುಳ ನೀಡಿರುವ ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಪ್ರಜ್ಞೆ ತಪ್ಪಿರುವ ಆಕೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ನೇತು ಹಾಕಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ತಕ್ಷಣವೇ ಆಕೆಯನ್ನ ಚಿಕಿತ್ಸೆಗೋಸ್ಕರ ಸದರ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಈಗಾಗಲೇ ಆರು ಜನರ ಬಂಧನ ಮಾಡಿದ್ದು, ಅವರನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಸಂತ್ರಸ್ತೆಯ ಮನೆಯಲ್ಲಿ ವಿವಾಹ ಸಮಾರಂಭವಿತ್ತು. ಇದೇ ಕಾರ್ಯದಲ್ಲಿ ಎಲ್ಲರೂ ಮಗ್ನರಾಗಿದ್ದರು. ಅಡುಗೆ ಸೇರಿದಂತೆ ಇತರೆ ಕೆಲಸ ಮಾಡಲು ಕೆಲ ಕಾರ್ಮಿಕರು ಇಲ್ಲಿಗೆ ಆಗಮಿಸಿದ್ದರು.
ಇದನ್ನೂ ಓದಿ: ಕಡಿಮೆಯಾದ ಕೋವಿಡ್... ಮಧ್ಯಪ್ರದೇಶದಲ್ಲಿ ಜೂನ್ 1ರಿಂದ ಅನ್ಲಾಕ್ ಪ್ರಕ್ರಿಯೆ
ಬೆಳಗ್ಗೆ ಮನೆಯ ಸೊಸೆ ಶೌಚಾಲಯಕ್ಕಾಗಿ ಹೊರಗಡೆ ಹೋಗಿದ್ದಾಳೆ. ಇದೇ ವೇಳೆ ಕಾರ್ಮಿಕರು ಆಕೆಯನ್ನ ಹಿಂಬಾಲಿಸಿ ಅತ್ಯಾಚಾರವೆಸಗಿದ್ದಾರೆ. ಜತೆಗೆ ಆಕೆಯ ಕೊರಳಲ್ಲಿದ್ದ ಆಭರಣ ದೋಚಿದ್ದಾರೆ. ಮಹಿಳೆ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯನ್ನ ವಿದ್ಯುತ್ ಕಂಬಕ್ಕೆ ನೇತು ಹಾಕಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಬಂಧಿತರ ವಿಚಾರಣೆ ನಡೆಸುತ್ತಿದ್ದಾರೆ.