ತೆಲಂಗಾಣ: ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್‌ಆರ್‌ಟಿಸಿ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸಂಜೆ 7:30 ರ ನಂತರ ಬಸ್ ನಿಲ್ದಾಣ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಮಹಿಳೆಯರು ಆರ್‌ಟಿಸಿ ಬಸ್ ಹತ್ತುವಂತೆ ಅಥವಾ ನಿಲ್ಲಿಸುವಂತೆ ತಿಳಿಸಿದ್ರೆ ಕೂಡಲೇ ಬಸ್ ನಿಲ್ಲಿಸುವಂತೆ ಆದೇಶ ಹೊರಡಿಸಿದೆ.
ಟಿಎಸ್‌ಆರ್‌ಟಿಸಿ ನಿನ್ನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದ್ದು, ಸಂಜೆ 7:30 ರ ನಂತರ ಮಹಿಳಾ ಪ್ರಯಾಣಿಕರು ಬಸ್ ಹತ್ತುವುದಕ್ಕೆ ಅಥವಾ ಇಳಿಯಲು ಬಯಸಿದರೆ ಕೂಡಲೇ ಅನುವು ಮಾಡಿಕೊಡಬೇಕು. ಎಲ್ಲಾ ಆರ್‌ಟಿಸಿ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ಈ ನಿಯಮ ಪಾಲಿಸಬೇಕು. ಒಂದು ವೇಳೆ ಬಸ್ ಚಾಲಕ ಅಥವಾ ಕಂಡಕ್ಟರ್ ಈ ನಿಯಮವನ್ನು ಪಾಲಿಸದಿದ್ದರೆ, ಪ್ರಯಾಣಿಕರು ಡಿಪೋ ವ್ಯವಸ್ಥಾಪಕರನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ಟಿಎಸ್‌ಆರ್‌ಟಿಸಿ ತಿಳಿಸಿದೆ.
ಮಹಿಳಾ ಪ್ರಯಾಣಿಕರು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ ಕೂಡಲೇ ಡಿಪೋ ವ್ಯವಸ್ಥಾಪಕರಿಗೆ ದೂರು ನೀಡಬಹುದು. ಅವರು ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಾರೆ. ನಿಮ್ಮ ಸುರಕ್ಷತೆಯ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದ್ದು, ಎಲ್ಲಾ ಮಹಿಳಾ ಪ್ರಯಾಣಿಕರು ಈ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಈ ಕುರಿತು ಅಭಿಪ್ರಾಯ ಹಂಚಿಕೊಂಡ ಹೈದರಾಬಾದ್ ಆರ್‌ಟಿಸಿ ಪ್ರಾದೇಶಿಕ ವ್ಯವಸ್ಥಾಪಕ ಸಿ.ಹೆಚ್ ವೆಂಕಣ್ಣ, ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಸಹ ಹೆಚ್ಚು ಉದ್ಯೋಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಖಾಸಗಿ ಸಾರಿಗೆ ಪ್ರಯಾಣ ಅಸುರಕ್ಷಿತವಾಗಿರಬಹುದು. ಆದ್ದರಿಂದ ಅವರು ಸುರಕ್ಷಿತವಾಗಿ ಈ ನಿಯಮ ಜಾರಿಗೆ ತರಲಾಗಿದೆ. ಈ ಸೇವೆಯನ್ನು 17 ಬಸ್ ಡಿಪೋಗಳಲ್ಲಿ ಪ್ರಾರಂಭಿಸಲಾಗಿದ್ದು, ಇದನ್ನು ಕಾರ್ಯಗತಗೊಳಿಸಲು ಎಲ್ಲಾ ಚಾಲಕರು ಮತ್ತು ಕಂಡಕ್ಟರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.