ಕೊಯಮತ್ತೂರು (ತಮಿಳುನಾಡು): ಜಿಲ್ಲೆಯ ಪೊಲ್ಲಾಚಿಯ ಸರ್ಕಾರಿ ಆಸ್ಪತ್ರೆಯಿಂದ ಐದು ದಿನದ ಹೆಣ್ಣು ಮಗುವನ್ನು ಕದ್ದ ಆರೋಪದ ಮೇಲೆ ಕೇರಳದ ಪಾಲಕ್ಕಾಡ್‌ನ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗಳನ್ನು ಸೋಮವಾರ ಬಂಧಿಸಲಾಗಿದೆ. ಅವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ ನವಜಾತ ಶಿಶುವನ್ನು ಆಸ್ಪತ್ರೆಯಿಂದ ಅಪಹರಿಸಲಾಗಿದ್ದು, ಅಪಹರಣಕಾರರ ಪತ್ತೆಗೆ ಪೊಲೀಸರು 12 ವಿಶೇಷ ತಂಡಗಳನ್ನು ರಚಿಸಿದ್ದರು. ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದಾಗ ಇಬ್ಬರು ಸಿಟಿ ರೈಲ್ವೆ ನಿಲ್ದಾಣದಲ್ಲಿ ಕಂಡುಬಂದಿದ್ದಾರೆ. ನಂತರ ಅವರು ಪೊಲ್ಲಾಚಿಯಿಂದ ಬಸ್ ಹತ್ತಿ ರೈಲಿನಲ್ಲಿ ಪಾಲಕ್ಕಾಡ್ಗೆ ಪ್ರಯಾಣಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿ ವಿದ್ಯಾರ್ಥಿಗೆ ಟೀಚರ್ ಟಾರ್ಚರ್?: ಕಾರಣ ಕೇಳಿದ ಪೋಷಕರಿಗೆ ಇಂತಹ ಉತ್ತರ!
ವಿಶೇಷ ತಂಡವೊಂದು ಪಾಲಕ್ಕಾಡ್ ಬಳಿಯ ಕೊಡುವಾಯೂರ್‌ಗೆ ಧಾವಿಸಿ ಮಗುವನ್ನು ರಕ್ಷಿಸಿದೆ. ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ಮಗುವನ್ನು ಅದರ ತಾಯಿ ದಿವ್ಯಭಾರತಿ ಅವರಿಗೆ ಹಸ್ತಾಂತರಿಸಲಾಯಿತು. ಪತಿಯಿಂದ ದೂರವಾಗಿರುವ ಮಗು ಕಳ್ಳತನದ ಆರೋಪಿ ಮಹಿಳೆ ಮಕ್ಕಳ ಕಳ್ಳಸಾಗಣೆಯಲ್ಲಿ ತೊಡಗಿದ್ದಾಳೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.