ಜೈಪುರ(ರಾಜಸ್ಥಾನ): ಅಪ್ರಾಪ್ತೆಯನ್ನು ಅಜ್ಜಿಯೊಬ್ಬಳು ಕೇವಲ 55 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಮದುವೆಯಾಗುವುದಾಗಿ ಅಪ್ರಾಪ್ತೆಯ ಖರೀದಿಸಿದ ಯುವಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ಮಾಡಿದ್ದಾನೆ. ನೊಂದ ಬಾಲಕಿ ಪೊಲೀಸರಿಗೆ ದೂರು ನೀಡಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ: ಜಾರ್ಖಂಡ್ ನಿವಾಸಿಯಾದ ಸಂತ್ರಸ್ತೆ ಬಾಲಕಿಯನ್ನು ಸ್ವತಃ ಅಜ್ಜಿಯೇ ಮಾರಾಟ ಮಾಡಿದ್ದಾರೆ. ಮೂವರು ಹೆಣ್ಣುಮಕ್ಕಳಲ್ಲಿ ಎರಡನೆಯವಳಾದ ಸಂತ್ರಸ್ತೆಯನ್ನು ತರಕಾರಿ ವ್ಯಾಪಾರಿಯೊಬ್ಬ 2 ತಿಂಗಳ ಹಿಂದೆ ಮನೆಗೆ ಬಂದು ಹುಡುಗಿಯ ಮಾರಾಟಕ್ಕೆ ಕೋರಿದ್ದ. ಅದರಂತೆ ಅಜ್ಜಿ 55 ಸಾವಿರ ರೂಗೆ ಮಾರಾಟಕ್ಕೆ ಒಪ್ಪಿದ್ದಳು. ಬಳಿಕ ಬಾಲಕಿಯನ್ನು ರೈಲಿನಲ್ಲಿ ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ಯುವಕನೊಂದಿಗೆ ಮದುವೆ ಮಾಡಿಸಿಕೊಡುವುದಾಗಿ ಅಜ್ಜಿ ಬಾಲಕಿಗೆ ಹೇಳಿದ್ದಾಳೆ.
ರಾಜಸ್ಥಾನದ ಮಹಿಳೆಯೊಬ್ಬಳು ಅಜ್ಜಿಯ ಬಳಿ ಬಂದು 55 ಸಾವಿರ ರೂಪಾಯಿ ನೀಡಿ ಬಾಲಕಿಯನ್ನು ತಮ್ಮ ಜೊತೆಗೆ ಕರೆದೊಯ್ದಿದ್ದಾರೆ. ಒಟ್ಟು ಮೊತ್ತದಲ್ಲಿ 40 ಸಾವಿರ ರೂ.ಯನ್ನು ಅಜ್ಜಿ ಪಡೆದರೆ, 15 ಸಾವಿರ ರೂ. ತರಕಾರಿ ವ್ಯಾಪಾರಿ ಪಡೆದುಕೊಂಡಿದ್ದಾನೆ. ಅಜ್ಜಿ ಮತ್ತು ತರಕಾರಿ ವ್ಯಾಫಾರಿ ಬಾಲಕಿಯನ್ನು ಖರೀದಿದಾರರೊಂದಿಗೆ ಕಳುಹಿಸಿ ಇಬ್ಬರೂ ಜಾರ್ಖಂಡ್‌ಗೆ ವಾಪಸ್ ತೆರಳಿದ್ದಾರೆ.
ಅಪ್ರಾಪ್ತೆಯ ಮೇಲೆ ಯುವಕನಿಂದ ಅತ್ಯಾಚಾರ: ಅಪ್ರಾಪ್ತೆಯನ್ನು ಖರೀದಿಸಿದ ಮಹಿಳೆ ಆಕೆಯ ಬಳಿಕ ನಿನ್ನನ್ನು ನನ್ನ ಮಗನಿಗೆ ಮದುವೆ ಮಾಡಿಕೊಡುತ್ತೇನೆ ಎಂದು ಹೇಳಿದ್ದಾಳೆ. 10 ದಿನಗಳ ನಂತರ ಮಹಿಳೆಯ ಮಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ನಂತರವೂ ಯುವಕ ಅಪ್ರಾಪ್ತೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನು ಮಹಿಳೆಯ ಬಳಿ ಹೇಳಿಕೊಂಡಾಗ ಆಕೆ ಗದರಿಸಿದ್ದಾಳೆ. ತಮ್ಮ ಮನೆಯವರಿಗೆ ಈ ಬಗ್ಗೆ ತಿಳಿಸುತ್ತೇನೆ ಎಂದಾಗ ಬಾಲಕಿಯ ಮೇಲೆ ಹಲ್ಲೆ ಮಾಡಿ, ಮನೆಯಲ್ಲೇ ಕೂಡಿ ಹಾಕಿದ್ದಾರೆ.
ಬಾಲಕಿಯನ್ನು ಮನೆಯಿಂದ ಹೊರಗೆ ಬರಲೂ ಬಿಡುತ್ತಿರಲಿಲ್ಲ. ಆರೋಪಿ ಯುವಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ, ಮತ್ತೊಬ್ಬ ಹುಡುಗಿಯನ್ನೂ ಮನೆಗೆ ಕರೆತಂದಿದ್ದ. ಇದನ್ನು ವಿರೋಧಿಸಿದರೂ ಆತ ತನ್ನ ಕೃತ್ಯವನ್ನು ಮುಂದುರಿಸಿದ್ದ ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಅಪ್ರಾಪ್ತೆಯನ್ನು ಮನೆಕೆಲಸಕ್ಕೆ ಬಳಕೆ: ಇಷ್ಟಕ್ಕೇ ಬಿಡದ ಖರೀದಿ ಮಾಡಿದ ಮಹಿಳೆ ಬಾಲಕಿಯನ್ನು ಮನೆಯ ಕೆಲಸಕ್ಕೂ ಬಳಸಿಕೊಂಡಿದ್ದಾಳೆ. ಮಾರುಕಟ್ಟೆಗೆ ತರಕಾರಿ ತರುವುದಕ್ಕೂ ಕಳುಹಿಸಿದ್ದಾಳೆ. ಇದನ್ನು ಪ್ರಶ್ನಿಸಿದಾಗ, ನಿನ್ನನ್ನು 55 ಸಾವಿರ ರೂ.ಗೆ ಖರೀದಿ ಮಾಡಿದ್ದೇವೆ. ನಾವು ಹೇಳಿದಂತೆ ಕೇಳಿಕೊಂಡು, ಮನೆಕೆಲಸ ಮಾಡಬೇಕು ಎಂದು ಗದರಿಸಿದ್ದಾರೆ.
ಇದನ್ನೇ ಬಳಸಿಕೊಂಡ ಅಪ್ರಾಪ್ತೆ ಹೊರಗೆ ಹೋದಾಗ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಅಕ್ರಮ ಖರೀದಿ, ಅತ್ಯಾಚಾರ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರ ಬರಲಿದೆ.