ಹೈದ್ರಾಬಾದ್(ತೆಲಂಗಾಣ) : ದಾಂಪತ್ಯ ಕಲಹದಿಂದಾಗಿ ಮಹಿಳಾ ನ್ಯಾಯವಾದಿಯೊಬ್ಬರು ನಾಲ್ಕನೇ ಅಂತಸ್ತಿನ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದ್ರಾಬಾದ್ನಲ್ಲಿ ರವಿವಾರ ಬೆಳಗಿನ ಜಾವ ನಡೆದಿದೆ. 23 ವರ್ಷದ ಶಿವಾನಿ ಎಂಬುವರೇ ಮೃತರಾಗಿದ್ದು, ಪತಿ ಅರ್ಜುನ್ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾರೆ.
ಇಲ್ಲಿನ ಡಿಫೆನ್ಸ್ ನೌಕರರ ಕಾಲೋನಿಯ ಒಂದನೇ ಹಂತದ ಲಕ್ಷ್ಮಿ ವಿಹಾರದಲ್ಲಿ ಈ ಘಟನೆ ಜರುಗಿದೆ. ಶಿವಾನಿ ಮತ್ತು ಅರ್ಜುನ್ ಐದು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಇವರ ದಾಂಪತ್ಯಕ್ಕೆ ಎರಡು ವರ್ಷದ ಗಂಡು ಮಗು ಕೂಡ ಇದೆ. ತನ್ನ ತಾಯಿ, ಸಹೋದರಿ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಶಿವಾನಿ ವಾಸವಾಗಿದ್ದರು. ಆದರೆ, ಶನಿವಾರ ರಾತ್ರಿ ಗಂಡ-ಹೆಂಡತಿ ಮಧ್ಯೆ ಜಗಳ ಉಂಟಾದ ನಂತರ ಈಕೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಾನಿ ಚಿಕ್ಕವರಿದ್ದಾಗಲೇ ತಂದೆ ತೀರಿಕೊಂಡಿದ್ದರು. ಹೀಗಾಗಿ, ಸೋದರ ಮಾವ ಆಕೆಯ ಜವಾಬ್ದಾರಿ ಹೊತ್ತಕೊಂಡು ಓದಿಸಿ ಲಾಯರ್ ಮಾಡಿಸಿದ್ದರು. ನಂತರ ಆಕೆಯ ಓದಿಗೆ ಹಣ ಖರ್ಚಾಗಿದೆ ಎಂದು ಸೋದರ ಮಾವ ಹೇಳಿಕೊಂಡು, 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅಂತೆಯೇ ಆತನಿಗೆ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಶಿವಾನಿ ನೀಡುತ್ತಿದ್ದರು.
ಆದರೆ, ಈ ಬಗ್ಗೆ ಪತಿ ಅರ್ಜನ್ ತಕರಾರು ತೆಗೆದು, ಗಲಾಟೆ ಮಾಡುತ್ತಿದ್ದ. ಇದೇ ವಿಷಯವಾಗಿ ಶನಿವಾರ ಸಹ ಗಲಾಟೆಯಾದ ನಂತರ ಶಿವಾನಿ ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಾಯಿ ಹೇಮಾ ಆರೋಪಿಸಿದ್ದಾರೆ. ಸದ್ಯ ಈ ಬಗ್ಗೆ ಚಂದಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ: 2 ತಿಂಗಳ ಹಿಂದೆ ಮದುವೆಯಾಗಿದ್ದ ಯೋಧ ಹುತಾತ್ಮ