ಜೋಧಪುರ: ಜಿಲ್ಲೆಯ ಗ್ರಾಮಾಂತರ ಪ್ರದೇಶದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮಹಿಳೆಯೊಬ್ಬಳು ತನ್ನ ಮಕ್ಕಳೊಂದಿಗೆ ಮನೆಯ ನೀರಿನ ತೊಟ್ಟಿಗೆ ಹಾರಿ ಪ್ರಾಣ ಕೊಟ್ಟಿದ್ದಾರೆ. ಘಟನೆಯಲ್ಲಿ ಮಕ್ಕಳಿಬ್ಬರ ಜೊತೆ ತಾಯಿಯೂ ಸಾವನ್ನಪ್ಪಿದ್ದು, ಅವರಲ್ಲಿ ಏಳು ತಿಂಗಳ ಹಸುಳೆಯೂ ಸೇರಿದೆ. ಘಟನೆ ಲೋಹಾವತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶೈತಾನ್ ಸಿಂಗ್ ನಗರದ ನಿವಾಸಿ ಇದನ್ ಸಿಂಗ್ ಅವರ ಮನೆಯಲ್ಲಿ ಭಾನುವಾರ ಮಧ್ಯಾಹ್ನ ಯಾರೂ ಇರಲಿಲ್ಲ. ಈ ಸಮಯದಲ್ಲಿ, ಅವರ ಪತ್ನಿ ಬೇಬು ಕನ್ವರ್ (24), ಎರಡು ವರ್ಷದ ಮಗ ದೇವೇಂದ್ರ ಸಿಂಗ್ ಹಾಗೂ ಏಳು ತಿಂಗಳ ಮಗು ತೇಜ್‌ಪಾಲ್ ಸಿಂಗ್ ಜೊತೆ ಮೂವರು ಮನೆಯ ಹೊರಗೆ ಇದ್ದ ನೀರಿನ ಟ್ಯಾಂಕ್ಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ಲೋಹಾವತ್ ಪೊಲೀಸ್ ಠಾಣೆ ಪ್ರಭಾರಿ ಶೈತಾನ್ರಾಮ್ ತಿಳಿಸಿದ್ದಾರೆ.
ಓದಿ: ಪ್ರವಾಹದ ನೀರಲ್ಲಿ ಕೊಚ್ಚಿಹೋದ ಪೊಲೀಸರು: ಒಬ್ಬರ ಶವ ಪತ್ತೆ.. ಇನ್ನೊಬ್ಬರು ನಾಪತ್ತೆ!
ಬೇಬು ಕನ್ವರ್ ಅತ್ತೆ -ಮಾವ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಹೊರಗೆ ನೀರಿನ ಟ್ಯಾಂಕ್ ಮುಚ್ಚಳ ತೆರೆದಿತ್ತು. ಒಳಗೆ ನೋಡಿದಾಗ ಶವಗಳು ಕಂಡಿವೆ. ಕೂಡಲೇ ಸುತ್ತಮುತ್ತಲಿನವರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ದೌಡಾಯಿಸಿ ಮೂವರನ್ನೂ ಹೊರತೆಗೆದರು. ಅಷ್ಟರಲ್ಲೇ ಮೂವರು ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರ ಮೃತದೇಹಗಳನ್ನು ಲೋಹಾವತ್ ಆಸ್ಪತ್ರೆಗೆ ರವಾನಿಸಿದರು. ಮೃತ ಬೇಬು ಅವರ ತಂದೆ ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದಾರೆ ಎಂದು ಠಾಣೆ ಪ್ರಭಾರಿ ತಿಳಿಸಿದ್ದಾರೆ.
ಜೂನ್ 16 ರಂದು ಗ್ರಾಮಾಂತರ ಪ್ರದೇಶದ ಮಾತೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಗಾದೇವಿ ತನ್ನ ಮೂವರು ಮಕ್ಕಳೊಂದಿಗೆ ನೀರಿನ ಟ್ಯಾಂಕ್ಗೆ ಹಾರಿ ಪ್ರಾಣ ಬಿಟ್ಟಿದ್ದರು. ಈ ಬಗ್ಗೆಯೂ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ನಾಲ್ಕು ದಿನಗಳ ಬಳಿಕ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿರುವುದರಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.