ಹೈದರಾಬಾದ್ : ಅವಳಿ ಮಕ್ಕಳು ಜನಿಸುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಇನ್ನೂ ಕೆಲವು ಮಹಿಳೆಯರು ತ್ರಿವಳಿ ಮಕ್ಕಳಿಗೂ ಜನ್ಮ ನೀಡಿದ ಉದಾಹರಣೆಗಳಿವೆ. ಆದರೆ, ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಪ್ರಕರಣಗಳು ತೀರಾ ವಿರಳ.
ಇದೀಗ ಹೈದರಾಬಾದ್ನಲ್ಲಿ ಗರ್ಭಿಣಿಯೊಬ್ಬರು ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾರೆ. ನಾಲ್ಕೂ ಮಕ್ಕಳು ಮತ್ತು ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ರಾಶಿ ಎಂಬ 27 ವರ್ಷದ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಂಗಳವಾರ ಸಂಜೆ ರಾಶಿಯವರಿಗೆ ಒಂದು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಸೇರಿ ನಾಲ್ಕು ಮಕ್ಕಳು ಜನಿಸಿದ್ದಾರೆ. ತಾಯಿ ಮತ್ತು ನಾಲ್ಕು ಮಕ್ಕಳೂ ಆರೋಗ್ಯವಾಗಿದ್ದಾರೆ. ನವಜಾತ ಶಿಶುಗಳು 1 ಕೆಜಿಗಿಂತ ಹೆಚ್ಚು ತೂಕವಿದೆ ಎಂದು ಹೆರಿಗೆ ಮಾಡಿದ ವೈದ್ಯರು ತಿಳಿಸಿದ್ದಾರೆ.
ಹೆರಿಗೆ ಸಮಯದಲ್ಲಿ ಯಾವುದೇ ಕಷ್ಟವಾಗಲಿಲ್ಲ ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಎರಡು ಮೂರು ದಿನಗಳ ನಂತರ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದಾರೆ. ಹಾಗೂ ತಮ್ಮ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳು ಜನಿಸಿದ ಅಪರೂಪದ ಪ್ರಕರಣ ನಡೆದಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ರೂ.1.83 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್ ಸಮರ್ಪಣೆ