ಭೋಪಾಲ್(ಮಧ್ಯಪ್ರದೇಶ): ಮಕ್ಕಳಿಂದ ದೂರವಾಗಿ ಭಿಕ್ಷಾಟನೆಯಲ್ಲಿ ಸಿಕ್ಕ ವ್ಯಕ್ತಿಯನ್ನೇ ಮಗನೆಂದು ಭಾವಿಸಿದ್ದ 78 ವರ್ಷದ ವೃದ್ಧೆ ಭಿಕ್ಷುಕಿಯ ಮೇಲೆ ಅದೇ ಪಾಪಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧೆಯ ಆರೋಗ್ಯ ಹದಗೆಟ್ಟಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಕ್ಟೋಬರ್ 26 ರಂದು ಈ ಕೃತ್ಯ ನಡೆದಿದೆ. ಸಂತ್ರಸ್ತೆ ವೃದ್ಧೆ ಖಾಂಡಾ ನಿವಾಸಿಯಾಗಿದ್ದು, ರಾಜಧಾನಿಗೆ ತನ್ನ ಮಗನೊಂದಿಗೆ ಬಂದಿದ್ದಳು. ದುರ್ವಿಧಿ ಎಂಬಂತೆ ಹೆತ್ತ ಮಗ ಮೃತಪಟ್ಟಿದ್ದ. ಬಳಿಕ ಇನ್ನಿಬ್ಬರು ಮಕ್ಕಳು ಆಕೆಯನ್ನು ಮನೆಯಿಂದ ಹೊರದೂಡಿದ್ದರು. ಇದರಿಂದ ವೃದ್ಧೆ ಬೀದಿಪಾಲಾಗಿದ್ದರು.
ಬಳಿಕ ಆಕೆ ಭೋಪಾಲ್ನ ದೇವಸ್ಥಾನವೊಂದರ ಮುಂದೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ಅಲ್ಲಿಂದ 37 ವರ್ಷದ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಆತನನ್ನು ವೃದ್ಧೆ ಮಗನೆಂದೇ ಭಾವಿಸಿದ್ದಳು. ಒಂದೇ ಕಡೆ ವಾಸ, ಊಟ, ಭಿಕ್ಷಾಟನೆ ಮಾಡುತ್ತಿದ್ದರು. ತನ್ನ ಊಟದಲ್ಲೂ ಆತನಿಗೆ ಪಾಲು ನೀಡಿ ಮಾತೃಹೃದಯ ಮೆರೆದಿದ್ದಳು.
ಮಗನೆನೆಸಿಕೊಂಡವ ಮಾಡಿದ ಪಾಪಿ ಕೆಲಸ: ಹೆತ್ತ ಮಗನಲ್ಲದಿದ್ದರೂ ಪ್ರೀತಿಯಿಂದ ನೋಡಿಕೊಂಡಿದ್ದವನು ಅಕ್ಷಮ್ಯ ಅಪರಾಧ ಮಾಡಿದ್ದ. ಅಕ್ಟೋಬರ್ 26 ರಂದು ವೃದ್ಧೆ ಉಳಿದಿದ್ದ ಗುಡಿಸಲಿಗೆ ಬಂದ ಪಾಪಿ, ಊಟ ಕೇಳಿದ್ದಾನೆ. ಇಲ್ಲ ಎಂದಾಗ ವೃದ್ಧೆ ಜೊತೆಗೆ ಕಿತ್ತಾಡಿದ್ದಾನೆ. ಅಲ್ಲಿದ್ದ ವೃದ್ಧನನ್ನು ಥಳಿಸಿದ್ದಾನೆ. ಬಿಡಿಸಲು ಬಂದ ವೃದ್ಧೆಯ ಮೇಲೆ ಪಾಪಿ ಹಲ್ಲೆ ಮಾಡಿ, ಅತ್ಯಾಚಾರ ಮಾಡಿದ್ದಾನೆ.
ಇದರಿಂದ ವೃದ್ಧೆಯ ಮುಖ ಮತ್ತು ಗಂಟಲು ಊದಿಕೊಂಡಿದೆ. ಅನಾರೋಗ್ಯಕ್ಕೀಡಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚೇತರಿಸಿಕೊಂಡ ವೃದ್ಧೆ ಎನ್ಜಿಒ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ. ದುರುಳನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಓದಿ: ಅಂಡಮಾನ್ನ ಹೈ ಪ್ರೊಫೈಲ್ ರೇಪ್ ಕೇಸ್: ಹರಿಯಾಣದಲ್ಲಿ ಒಬ್ಬನ ಬಂಧನ