ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯರೂ ಸೇರಿದಂತೆ ಜನರ ಗುಂಪೊಂದು ಮಹಿಳೆಯೊಬ್ಬರ ಕೂದಲು ಕತ್ತರಿಸಿ, ಬಟ್ಟೆ ಹರಿದು, ಮುಖಕ್ಕೆ ಕಪ್ಪು ಬಣ್ಣ ಬಳಿದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿರುವ ಘಟನೆ ಶಹದಾರಾ ಪ್ರದೇಶದಲ್ಲಿ ನಡೆದಿದೆ.
ಬುಧವಾರ ಈ ಘಟನೆ ನಡೆದಿದ್ದು, ಆರೋಪಿಗಳು ಶಹದಾರಾ ಪ್ರದೇಶದ ಅಕ್ರಮ ಮದ್ಯ ಮಾರಾಟಗಾರರು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಪೊಲೀಸರಿಗೆ ಲಭ್ಯವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಶಹದಾರಾ ಉಪ ಪೊಲೀಸ್ ಆಯುಕ್ತ ಆರ್. ಸತ್ಯಸುಂದರಂ, ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ. ಈಗಾಗಲೇ ನಾಲ್ವರು ಮಹಿಳೆಯರನ್ನು ಬಂಧಿಸಿದ್ದೇವೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲು ಅಧಿಕಾರಿಗಳ ತಂಡವೊಂದನ್ನ ರಚಿಸಲಾಗಿದೆ. ಶೀಘ್ರದಲ್ಲೇ ಉಳಿದ ಎಲ್ಲ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
ಸಂತ್ರಸ್ತೆಯು ಕಳೆದ ಕೆಲವು ವರ್ಷಗಳಿಂದ ಶಹದಾರಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮಹಿಳೆಗೆ ಮದುವೆಯಾಗಿ ಒಂದು ಮಗುವಿದೆ. ನೆರೆಹೊರೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಏಕಪಕ್ಷೀಯ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಆದರೆ ಮಹಿಳೆ, ಆತನನ್ನು ತಿರಸ್ಕರಿಸಿದ್ದ ಹಿನ್ನೆಲೆ ಕಳೆದ ಕೆಲ ದಿನಗಳ ಹಿಂದೆ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಮಹಿಳೆಯ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿ, ಮಹಿಳೆಯ ಮೇಲೆ ಈ ಹಿಂದೆಯೇ ಒಮ್ಮೆ ಹಲ್ಲೆ ಕೂಡಾ ನಡೆಸಿದ್ದರು. ಸದ್ಯಕ್ಕೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿದ್ದು, ತನಿಖೆ ಮುಂದುವರೆದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ