ಆಂಧ್ರಪ್ರದೇಶ: ಇಲ್ಲೊಂದು ಕುಟುಂಬ ಬೇವಿನ ಮರವನ್ನು ಕತ್ತರಿಸದೆ ಮೂರು ಅಂತಸ್ತಿನ ಮನೆ ನಿರ್ಮಾಣ ಮಾಡಿದೆ. ಪ್ರಕಾಶಂ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ.
ರಾಮಚಂದ್ರ ರಾವ್ ಎಂಬುವರು ಪ್ರಕಾಶಂ ಜಿಲ್ಲೆಯ ಒಂಗೋಲ್ ಪಟ್ಟಣದ ಜಮ್ಮಿಚೆಟ್ಟು ಬೀದಿಯಲ್ಲಿ ವಾಸಿಸುತ್ತಿದ್ದಾರೆ. ಇವರ ಪೂರ್ವಜರು ಈ ಪ್ರದೇಶದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರಂತೆ. ರಾಮಚಂದ್ರ ರಾವ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಳೆಯ ಗುಡಿಸಲುಗಳನ್ನು ಬದಲಿಸುವ ಮೂಲಕ ಹೊಸ ಮನೆ ನಿರ್ಮಿಸಲು ಅವರು ಯೋಜನೆ ರೂಪಿಸಿದ್ದಾರೆ. ಆದರೆ, ಮನೆ ನಿರ್ಮಾಣ ಮಾಡಲು ಅಳತೆ ತೆಗೆದುಕೊಳ್ಳಬೇಕಾದರೆ ಅಡ್ಡಲಾಗಿ ಇರುವ ಬೇವಿನ ಮರ ಕತ್ತರಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮರವನ್ನು ತೆಗೆಯಲೇಬೇಕು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ರಾಮಚಂದ್ರ ರಾವ್ ತಮ್ಮ ಅಜ್ಜನ ಕಾಲದಿಂದ ಇರುವ ಮರವನ್ನು ಕಡಿಯಲು ಮುಂದಾಗಲಿಲ್ಲ. ಬದಲಿಗೆ ಬೇರೆಯದೇ ಪ್ಲಾನ್ ಮಾಡಿದರು.
ರಾಮಚಂದ್ರ ರಾವ್ ಈ ಬೇವಿನ ಮರವನ್ನು ದೇವರು ಎಂದೇ ಪರಿಗಣಿಸಿದ್ದಾರೆ. ಅಡ್ಡಲಾಗಿ ಬೆಳೆದ ಕೊಂಬೆಗಳನ್ನು ಮಾತ್ರ ತೆಗೆದು ಅದಕ್ಕೆ ತಕ್ಕಂತೆ ಮನೆ ನಿರ್ಮಾಣ ಮಾಡಿದ್ದಾರೆ. ಮರದ ಬೇರುಗಳು ಮನೆಯ ಮಧ್ಯದಲ್ಲಿವೆ. ಮರ ಇನ್ನೂ ಹಸಿರಾಗಿದ್ದು, ಮನೆಯ ಸದಸ್ಯರಲ್ಲಿ ಇದೂ ಕೂಡ ಒಂದಾಗಿದೆ.
ರಾಮಚಂದ್ರ ರಾವ್ ಪ್ರಸ್ತುತ ವಿದೇಶದಲ್ಲಿದ್ದಾರೆ. ಅವರ ಮನೆಯನ್ನು ಬಾಡಿಗೆಗೆ ನೀಡಲಾಗಿದ್ದು, ಬಾಡಿಗೆಗೆ ಇರುವವರು ಕೂಡ ಬೇವಿನ ಮರವನ್ನು ದೇವರಂತೆ ಪೂಜಿಸುತ್ತಿದ್ದಾರೆ.