ನವದೆಹಲಿ: ಜೀವನ ಮಟ್ಟ ಹಾಗೂ ಆರೋಗ್ಯ ಸುಧಾರಣೆಗಾಗಿ ಸಾವಯವ ಆಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಜಾಗತಿಕ ಮಟ್ಟದಲ್ಲೇ ಹಲವು ಯೋಜನೆಗಳನ್ನು ಕೈಗೂಳ್ಳಲಾಗುತ್ತಿದೆ. ಇದರ ಭಾಗವಾಗಿಯೇ ಮಧ್ಯ ಪ್ರದೇಶ ಇದೀ ದೇಶದಲ್ಲಿ ಸಾವಯವ ಕೃಷಿಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
ಮಧ್ಯಪ್ರದೇಶವು ರಾಷ್ಟ್ರೀಯ ಸಾವಯವ ಉತ್ಪಾದನೆಯ ಕಾರ್ಯಕ್ರಮ (ಎನ್‌ಪಿಒಪಿ) ಅಡಿ ಒಂದು ಮಿಲಿಯನ್ ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶ ಹೊಂದಿದ್ದು, ಇದು ದೇಶದಲ್ಲಿ ಪ್ರಮಾಣೀಕೃತ ಸಾವಯವ ಕೃಷಿಯನ್ನು ಉತ್ತೇಜಿಸುವ ಕಾರ್ಯಕ್ರಮದ ಅಡಿ ಒಟ್ಟು ಪ್ರದೇಶಕ್ಕಿಂತ ಶೇ.38 ಕ್ಕಿಂತ ಹೆಚ್ಚಾಗಿದೆ.
ಎನ್‌ಪಿಒಪಿ ಯೋಜನೆಯಡಿ ಸಾವಯವ ಕೃಷಿ ಮತ್ತು ಕಾಡು ಕೊಯ್ಲು, ಜಲಚರ ಸಾಕಣೆ, ಜಾನುವಾರು ಉತ್ಪನ್ನಗಳು ಸೇರಿದಂತೆ ಇತರ ಉತ್ಪನ್ನಗಳಿಗೆ ಪ್ರಮಾಣೀಕರಣ ಕಾರ್ಯಕ್ರಮಗಳ ಮೌಲ್ಯಮಾಪನ ಸಾಧನಗಳನ್ನು ಒದಗಿಸುತ್ತದೆ. ಆ ಮೂಲಕ ಸಾವಯವ ಕೃಷಿಯಡಿ ತಮ್ಮ ಕೃಷಿ ಪ್ರದೇಶವನ್ನು ಹೆಚ್ಚಿಸಲು ಕೇಂದ್ರವು ರಾಜ್ಯಗಳಿಗೆ ಸಹಾಯ ಮಾಡುತ್ತಿದೆ. ಸಾವಯವ ಉತ್ಪನ್ನಗಳ ಮಾನ್ಯತೆ ಮತ್ತು ಅವುಗಳ ಪ್ರಮಾಣೀಕರಣದಲ್ಲಿ ಎನ್‌ಪಿಒಪಿ ಸಹ ಸಹಾಯ ಮಾಡುತ್ತದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವೀಕಾರಾರ್ಹವಾಗಿಸುತ್ತದೆ.
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಅಧಿಸೂಚನೆಯ ಪ್ರಕಾರ, ಎನ್‌ಪಿಒಪಿ ಅಡಿ ಪ್ರಮಾಣೀಕರಿಸಿದ ಉತ್ಪನ್ನವು ಸಾವಯವ ಎಂದು ರಫ್ತು ಮಾಡಲು ಅರ್ಹವಾಗಿದೆ, ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಗಣನೀಯವಾಗಿ ಹೆಚ್ಚಿನ ಬೆಲೆಯನ್ನು ಪಡೆಯುತ್ತದೆ. ಉದಾಹರಣೆಗೆ ಯುರೋಪಿಯನ್ ಯೂನಿಯನ್ (ಇಯು) ದೇಶಗಳಿಗೆ ರಫ್ತು ಮಾಡಲು ಸಂಸ್ಕರಿಸದ ಸಸ್ಯ ಉತ್ಪನ್ನಗಳಿಗೆ ಯುರೋಪಿಯನ್ ಕಮಿಷನ್ ಭಾರತದ ಎನ್‌ಪಿಒಪಿಗೆ ಸಮಾನತೆ ನೀಡಿದೆ.
ಸಾವಯವ ಕೃಷಿಯ ಉತ್ತೇಜನವು ಭಾರತೀಯ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದೆ. ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಪ್ರಧಾನಿ ಮೋದಿ ಅವರು ಸಾವಯವ ಕೃಷಿಗೆ ಸಂಪೂರ್ಣವಾಗಿ ಪ್ರಮಾಣೀಕರಿಸಿದ ಸಿಕ್ಕಿಂ ರಾಜ್ಯವನ್ನು ಉದಾಹರಣೆಯನ್ನು ನೀಡುವ ಮೂಲಕ ಸಾವಯವ ಕೃಷಿಯ ಮಹತ್ವವನ್ನು ಆಗಾಗ್ಗೆ ಎತ್ತಿ ತೋರಿಸಿದ್ದಾರೆ.
ಭಾರತದಲ್ಲಿ ರಾಜ್ಯವಾರು ಸಾವಯವ ಕೃಷಿ: ಮಧ್ಯಪ್ರದೇಶದ ನಂತರ ಮಹಾರಾಷ್ಟ್ರವು ಕೈಗಾರಿಕಾ ಮತ್ತು ಕೃಷಿ ಆರ್ಥಿಕತೆಯನ್ನು ಹೊಂದಿದೆ. ಮಂಗಳವಾರ ಲೋಕಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಂಚಿಕೊಂಡ ಅಂಕಿ- ಅಂಶಗಳ ಪ್ರಕಾರ, ಮಹಾರಾಷ್ಟ್ರವು 3,71,722 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿಯನ್ನು ಹೊಂದಿದೆ.
ಭೌಗೋಳಿಕ ವಿಸ್ತೀರ್ಣದಲ್ಲಿ ಭಾರತದ ಅತಿದೊಡ್ಡ ರಾಜ್ಯವಾದ ರಾಜಸ್ಥಾನವು 2,98,686 ಹೆಕ್ಟೇರ್‌ಗಳಿಗಿಂತ ಹೆಚ್ಚು ಸಾವಯವ ಕೃಷಿ ಮಾಡುವ ಮೂಲಕ 3ನೇ ಸ್ಥಾನದಲ್ಲಿದೆ. 2,00,000 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ವಿಶ್ವದ ಒಂಬತ್ತನೇ ಅತಿದೊಡ್ಡ ಬಿಸಿ ಉಪೋಷ್ಣವಲಯದ ಮರುಭೂಮಿ - ಥಾರ್ ಮರುಭೂಮಿಗೆ ನೆಲೆಯಾಗಿರುವ ರಾಜ್ಯಕ್ಕೆ ಇದು ಸಣ್ಣ ಸಾಧನೆಯಲ್ಲ.
ರಾಜ್ಯಕ್ಕೆ ಎಷ್ಟನೇ ಸ್ಥಾನ?: ರಾಜಸ್ಥಾನದ ನಂತರ ಗುಜರಾತ್ (1,47,866 ಹೆಕ್ಟೇರ್) ಹಾಗೂ ಕರ್ನಾಟಕವು 95,050 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿಯಲ್ಲಿ ಕ್ರಮವಾಗಿ ನಾಲ್ಕು ಮತ್ತು 5ನೇ ಸ್ಥಾನವನ್ನು ಪಡೆದುಕೊಂಡಿವೆ. ಪೂರ್ವ ರಾಜ್ಯವಾದ ಒಡಿಶಾ 92,695 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿಯನ್ನು ಹೊಂದಿದೆ, ನಂತರ ಸಿಕ್ಕಿಂ (75,730 ಹೆ), ಗುಡ್ಡಗಾಡು ರಾಜ್ಯವಾದ ಉತ್ತರಾಖಂಡ್ 74,826 ಹೆಕ್ಟೇರ್‌ಗಳೊಂದಿಗೆ 8 ನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶವು 67,443 ಹೆಕ್ಟೇರ್ ಪ್ರದೇಶದೊಂದಿಗೆ 9 ನೇ ಸ್ಥಾನದಲ್ಲಿದೆ. ನಂತರದಲ್ಲಿ ಜಾರ್ಖಂಡ್ (53,262 ಹೆಕ್ಟೇರ್) ಇದೆ.
ಇತರ ರಾಜ್ಯಗಳಲ್ಲಿ 50,000 ಹೆಕ್ಟೇರ್‌ಗಿಂತ ಕಡಿಮೆ ಸಾವಯವ ಕೃಷಿ ಇದೆ. ಕೇರಳ 45,070 ಹೆಕ್ಟೇರ್, ಮೇಘಾಲಯ 38,376 ಹೆಕ್ಟೇರ್, ಆಂಧ್ರಪ್ರದೇಶ 36,801 ಹೆಕ್ಟೇರ್, ತಮಿಳುನಾಡು 31,629 ಹೆಕ್ಟೇರ್ ಮತ್ತು ಜಮ್ಮು ಮತ್ತು ಕಾಶ್ಮೀರ 30,620 ಹೆಕ್ಟೇರ್ ಹೊಂದಿದೆ. ಬಿಹಾರದಲ್ಲಿ 29,903 ಹೆಕ್ಟೇರ್ ಸಾವಯವ ಕೃಷಿ, ಛತ್ತೀಸ್‌ಗಢ (23,209), ಅಸ್ಸೋಂ (18,471), ನಾಗಾಲ್ಯಾಂಡ್ (14,790), ಅರುಣಾಚಲ ಪ್ರದೇಶ (13,114), ಮಿಜೋರಾಂ (13,039), ಮಣಿಪುರ (12,725), ಮತ್ತು ಗೋವಾ (12,632).
ಗುಡ್ಡಗಾಡು ರಾಜ್ಯವಾದ ಹಿಮಾಚಲ ಪ್ರದೇಶವು 11,854 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿಯನ್ನು ಹೊಂದಿದೆ, ನಂತರ ತೆಲಂಗಾಣ (6,866 ಹೆಕ್ಟೇರ್), ತ್ರಿಪುರ (6,521) ಹಾಗೂ ಪಶ್ಚಿಮ ಬಂಗಾಳ (6,302). ಭಾರತದ ಎರಡು ಅಗ್ರ ಕೃಷಿ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್ ಅನುಕ್ರಮವಾಗಿ ಕೇವಲ 4,903 ಮತ್ತು 2,021 ಹೆಕ್ಟೇರ್‌ಗಳೊಂದಿಗೆ ಪ್ರಮಾಣೀಕೃತ ಸಾವಯವ ಕೃಷಿಯ ವಿಷಯದಲ್ಲಿ ಕಳಪೆ ಸಾಧನೆ ತೋರಿವೆ.
ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪವು 896 ಹೆಕ್ಟೇರ್‌ಗಳನ್ನು ಸಾವಯವ ಕೃಷಿ ಹೊಂದಿದ್ದರೆ, ಕೇಂದ್ರಾಡಳಿತ ಪ್ರದೇಶ ಲಡಾಖ್ 818 ಹೆಕ್ಟೇರ್ ನಂತರ ಪಾಂಡಿಚೇರಿ 23.65 ಹೆಕ್ಟೇರ್‌ಗಳಲ್ಲಿದೆ. ಭಾರತದ ರಾಷ್ಟ್ರ ರಾಜಧಾನಿ ದೆಹಲಿಯು ಕೇವಲ 5.17 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿಯನ್ನು ಹೊಂದಿದೆ.
ಇದನ್ನೂ ಓದಿ: ತೈಲ ಬೆಲೆ ನಿಯಂತ್ರಣ ಸರ್ಕಾರಕ್ಕೆ ಸವಾಲು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್