ಅಲಿಗಢ (ಉತ್ತರ ಪ್ರದೇಶ): ಪ್ರೀತಿ ಕುರುಡು ಎಂಬ ಮಾತಿದೆ. ಪ್ರೀತಿಯ ನಶೆ ಏರಿದಾಗ ಏನೂ ಗೋಚರಿಸುವುದಿಲ್ಲ ಅಂತಾರೆ. ಆದರೆ ವಾಸ್ತವಕ್ಕೆ ಬಂದಾಗ ಜೀವನದ ನಿಜವಾದ ಅರ್ಥ ತಿಳಿಯುತ್ತದೆ. ಇದಕ್ಕೆ ಪೂರಕವೆನಿಸುವ ಪ್ರಕರಣ ಅಲಿಗಢ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಸಿ ಮದುವೆಯಾದ ನಂತರ ವಿದ್ಯಾವಂತ ಹುಡುಗಿಗೆ ತನ್ನ ಪತಿ ಕೇವಲ 12 ನೇ ತರಗತಿ ಪಾಸಾಗಿದ್ದಾನೆ ಎಂದು ತಿಳಿದಿದೆ. ಹೀಗಾಗಿ ಆಕೆ ತನ್ನ ಪತಿಯಿಂದ ದೂರವಾಗಲು ಇಚ್ಛಿಸಿದ್ದು, ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾಳೆ. ಎರಡೂ ಕಡೆಯವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆದರೂ ಎಲ್ಲ ಪ್ರಯತ್ನಗಳೂ ವಿಫಲವಾಗಿರುವುದು ತಿಳಿದುಬಂದಿದೆ.
ಅತ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಎಂಎ, ಬಿಇಡಿ ನಿವಾಸಿಯಾಗಿರುವ ಯುವತಿಯೊಬ್ಬಳು ಅದೇ ಪ್ರದೇಶದ ಯುವಕನೊಂದಿಗೆ ಲವ್ನಲ್ಲಿ ಬಿದ್ದಿದ್ದಳು. ಎರಡು ವರ್ಷಗಳ ಹಿಂದೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಮನೆಯವರಿಂದ ಮರೆಮಾಚಿಕೊಂಡು ಮದುವೆಯಾಗಿ ಜೀವನ ನಡೆಸುತ್ತಿದ್ದರು.
ಮದುವೆಯ ನಂತರ ಹುಡುಗಿ ತನ್ನ ಗಂಡನ ಶೈಕ್ಷಣಿಕ ಅರ್ಹತೆಯ ಬಗ್ಗೆ ತಿಳಿದುಕೊಂಡಿದ್ದಾಳೆ. ಪತಿ 12 ನೇ ತರಗತಿ ಪಾಸ್ ಆಗಿರುವುದರ ಬಗ್ಗೆ ಗಮನಕ್ಕೆ ಬಂದಿದೆ. ಇದರಿಂದ ಆಕೆ ಕೋಪ ಬಂದಿದೆ. ಈ ವಿಷಯ ಇಬ್ಬರ ಕುಟುಂಬಸ್ಥರಿಗೂ ತಲುಪಿದಾಗ ಬಿಗುವಿನ ವಾತಾವರಣ ಉಂಟಾಗಿದೆ. ಆದ್ರೂ ಸಹ ಪತಿಯ ಕಡೆಯಿಂದ ಅನೇಕ ಸುತ್ತಿನ ರಾಜಿ ಒಪ್ಪಂದಗಳು ನಡೆದಿವೆ. ಇಬ್ಬರನ್ನೂ ಒಂದು ಮಾಡಲು ಪತಿಯ ಕುಟುಂಬಸ್ಥರು ಎಷ್ಟೇ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಆದರೆ ಈ ವಿಷಯ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು, ಮಹಿಳೆ ತನ್ನ ಪತಿಯಿಂದ ದೂರವಾಗಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ಇದನ್ನೂ ಓದಿ: ಮದ್ಯ ಖರೀದಿಗೆ ವಯಸ್ಸಿನ ಇಳಿಕೆ ಇಲ್ಲ: ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ
ಆಪ್ತಸಮಾಲೋಚಕ ಯೋಗೇಶ್ ಸಾರಸ್ವತ್ ಅವರು ನ್ಯಾಯಾಲಯದಲ್ಲಿ ಈ ಪ್ರಕರಣದ ಇತ್ಯರ್ಥಕ್ಕೆ ಎಲ್ಲ ಪ್ರಯತ್ನ ಮಾಡಿದರು. ಅಲ್ಲಿಯೂ ಸಹ ಯಾವುದೇ ಪ್ರಯೋಜನ ಆಗಲಿಲ್ಲ. ಆಪ್ತಸಮಾಲೋಚಕ ಯೋಗೇಶ್ ಸಾರಸ್ವತ್ ಅವರು ಮಾತನಾಡಿ, ಇಬ್ಬರೂ ಮದುವೆಯಾಗಿದ್ದರು. ಆದರೆ ಶೈಕ್ಷಣಿಕ ಅರ್ಹತೆ ವಿಷಯದಲ್ಲಿ ಪತ್ನಿ ತನ್ನದೇ ದಾರಿ ಅನುಸರಿಸುತ್ತಿದ್ದಾರೆ. ಇಬ್ಬರೂ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಬ್ಬರ ಹೇಳಿಕೆಗಳನ್ನು ನ್ಯಾಯಾಲಯದಲ್ಲಿ ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಕೋರ್ಟ್ ಇಬ್ಬರನ್ನೂ ಮದುವೆ ಬಂಧನದಿಂದ ಮುಕ್ತಗೊಳಿಸಲಿದೆ. ಆದರೆ, ಪ್ರೇಮ ವಿವಾಹದ ನಂತರ ಹೆಂಡತಿಯ ಈ ನಿರ್ಧಾರ ಆಘಾತಕಾರಿಯಾಗಿದೆ ಎಂದು ನ್ಯಾಯಾಧೀಶರು ವಿಷಾದ ವ್ಯಕ್ತಪಡಿಸಿದ್ದಾಗಿ ತಿಳಿಸಿದರು.
ಇಬ್ಬರು ಅನೇಕ ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾಗ ಪತ್ನಿಗೆ ಯಾವುದೇ ಶೈಕ್ಷಣಿಕ ವಿಷಯ ಅಡ್ಡಿಯಾಗಲಿಲ್ಲ. ಆದ್ರೆ ಗಂಡನ ಶೈಕ್ಷಣಿಕ ವಿಷಯ ತಿಳಿದ ಪತ್ನಿ ವಿಚ್ಛೇದನ ಪಡೆಯುವಷ್ಟು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ದುರಂತವೇ ಸರಿ ಎನ್ನುತ್ತಾರೆ ಈ ಸುದ್ದಿ ತಿಳಿದವರು.
ಇದನ್ನೂ ಓದಿ: ಬೆಂಗಳೂರಲ್ಲಿ ಕೆಳಮನೆ ಮಹಿಳೆ, ಮೇಲ್ಮನೆ ವ್ಯಕ್ತಿ ನಾಪತ್ತೆ: ಅವರ ಗಂಡ, ಇವರ ಪತ್ನಿಯಿಂದ ಪ್ರತ್ಯೇಕ ದೂರು