ಶ್ರೀಹರಿಕೋಟ, ಆಂಧ್ರಪ್ರದೇಶ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟಾ ರಾಕೆಟ್ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಸಿ57 (ಪಿಎಸ್‌ಎಲ್‌ವಿ) ಮೂಲಕ ಆದಿತ್ಯ ಎಲ್1 ಉಪಗ್ರಹವನ್ನು ಬಾನಂಗಳಿಗೆ ಕಳುಹಿಸುತ್ತಿದೆ. ಎಲ್1 ಕೇಂದ್ರಕ್ಕೆ ನಮ್ಮ ದೇಶ ಕಳುಹಿಸುತ್ತಿರುವ ಮೊದಲ ಬಾಹ್ಯಾಕಾಶ ಮಿಷನ್ ಇದಾಗಿದೆ. ಆದಿತ್ಯ ಎಲ್1 ಪ್ರಾಜೆಕ್ಟ್ ಅನ್ನು ನಿಗರ್ ಶಾಜಿ ಅವರು ಮುನ್ನಡೆಸುತ್ತಿದ್ದಾರೆ. ನಿಗರ್ ಶಾಜಿ ಯಾರೆಂಬುದು ತಿಳಿಯೋಣಾ ಬನ್ನಿ...

ಕೃಷಿಕ ಕುಟುಂಬದಿಂದ ಬಂದಿರುವ ನಿಗರ್ ಶಾಜಿ ಅವರ ಹುಟ್ಟೂರು ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಸೆಂಗೊಟ್ಟೈ ಪಟ್ಟಣ. ತಾಯಿ ತಂದೆ.. ಶೇಖ್ ಮೀರಾನ್, ಸೈತೂನ್ ಬಿವಿ. ತಂದೆ ಡಿಗ್ರಿ ಮಾಡಿ ಕೃಷಿ ಮಾಡುತ್ತಿದ್ದರು. ತಾಯಿ ಗೃಹಿಣಿ. ನಿಗರ್ ಶಾಜಿ ಅವರು ಸೆಂಗೋಟ್ಟೈ ಎಸ್‌ಆರ್‌ಎಂ ಬಾಲಕಿಯರ ಶಾಲೆಯಲ್ಲಿ ಇಂಟರ್‌ವರೆಗೆ ಓದಿದ್ದಾರೆ. ನಂತರ, ಅವರು ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯಕ್ಕೆ ಸೇರಿಕೊಂಡರು. ಅಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ರಾಂಚಿಯ BIT ಯಿಂದ ME ಎಲೆಕ್ಟ್ರಾನಿಕ್ಸ್ ಮತ್ತು ಸಂವಹನವನ್ನು ಪೂರ್ಣಗೊಳಿಸಿದರು.
'ನನ್ನ ವ್ಯಾಸಂಗ ಮುಗಿದ ತಕ್ಷಣ ಇಸ್ರೋ ಉದ್ಯೋಗಕ್ಕಾಗಿ ಅಧಿಸೂಚನೆ ಹೊರಡಿಸಿತ್ತು. ಕೂಡಲೇ ನಾನು ಅರ್ಜಿ ಸಲ್ಲಿಸಿದೆ ಮತ್ತು ಕೆಲಸ ಪಡೆದುಕೊಂಡೆ. ಎಲ್ಲವೂ ಕ್ಷಣಾರ್ಧದಲ್ಲೇ ನಡೆದಂತಾಯ್ತು‘ ಎಂದು ನಿಗರ್ ಹೇಳುತ್ತಾರೆ. ನಿಗರ್ ಅವರ ಪತಿ ದುಬೈನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳು. ಹುಡುಗ ಫ್ಲೂಯಿಡ್ ಮೆಕ್ಯಾನಿಕ್ಸ್ ನಲ್ಲಿ ಡಾಕ್ಟರೇಟ್ ಪದವಿ ಪಡೆದು ನೆದರ್ಲ್ಯಾಂಡ್ನಲ್ಲಿ ಕೆಲಸ ಮಾಡುತ್ತಿದ್ದರೆ, ಹುಡುಗಿ ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿದಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಪ್ರಮುಖ ಕೇಂದ್ರವಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (SHAAR) 1987 ರಲ್ಲಿ ನಿಗರ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ ಬೆಂಗಳೂರಿನ ಯು.ಆರ್.ರಾವ್ ಸ್ಯಾಟಲೈಟ್ ಸೆಂಟರ್ಗೆ ವರ್ಗಾವಣೆ ಮೇಲೆ ಹೋದರು. ಅಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾಗ.. ಆದಿತ್ಯ-ಎಲ್1 ಯೋಜನಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.
ನಿಗರ್ ಅವರು ಇದಕ್ಕೂ ಮೊದಲು ಅವರು ವಿವಿಧ ಸಾಮರ್ಥ್ಯಗಳಲ್ಲಿ ಭಾರತೀಯ ದೂರಸಂವೇದಿ, ಸಂವಹನ ಮತ್ತು ಅಂತರಗ್ರಹ ಉಪಗ್ರಹಗಳ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಸಂಪನ್ಮೂಲ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಇಸ್ರೋ ಕೈಗೊಂಡ ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹ ರಿಸೋರ್ಸ್‌ಸ್ಯಾಟ್-2A ಗೆ ಸಹಾಯಕ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಪ್ರಯೋಗಗಳಲ್ಲಿ, ಇಮೇಜ್ ಕಂಪ್ರೆಷನ್, ಸಿಸ್ಟಮ್ ಎಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ಇಂಟರ್ನೆಟ್ ವರ್ಕಿಂಗ್ಸ್‌ನಂತಹ ಪ್ರಮುಖ ಅಂಶಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತ ಪಡಿಸಲಾಯಿತು.
ದೇಶಕ್ಕೆ ಪ್ರತಿಷ್ಠಿತವಾದ ಆದಿತ್ಯ-ಎಲ್1 ನಂತಹ ಯೋಜನೆಯ ನಿರ್ದೇಶಕರಾಗುವುದಕ್ಕಿಂತ ಹೆಚ್ಚಿನ ತೃಪ್ತಿ ಏನಿದೆ. ಪ್ರತಿ ಹೆಜ್ಜೆಯಲ್ಲೂ ಸವಾಲುಗಳಿವೆ. ಆದರೆ ಈ ಮೊದಲು ಕಷ್ಟ ಅನಿಸುವುದಿಲ್ಲ. ಇಸ್ರೋದಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅನುಕೂಲಕರ ವಾತಾವರಣವಿದೆ. ಗುರಿಗಳನ್ನು ಆಯ್ಕೆ ಮಾಡಬೇಕು. ಆದರೆ ಇಲ್ಲಿ ಅತ್ಯುತ್ತಮ ಪ್ರೋತ್ಸಾಹ ಬರುತ್ತದೆ. ದೇಶಾದ್ಯಂತ ಇರುವ ಇಸ್ರೋ ಕೇಂದ್ರಗಳಲ್ಲಿ ಎಲ್ಲಿಯೂ ಮಹಿಳೆಯರ ಬಗ್ಗೆ ಯಾವುದೇ ತಾರತಮ್ಯ ಅಥವಾ ಅಸಮಾನತೆ ಇಲ್ಲ. ನಮ್ಮ ಕೆಲಸ ಮತ್ತು ಸಾಮರ್ಥ್ಯಗಳಿಂದ ನಾವು ಗುರುತಿಸಲ್ಪಡುತ್ತೇವೆ. ಭವಿಷ್ಯದಲ್ಲಿ ನಂಬಿಕೆಯಿಂದ ಕೆಲಸ ಮಾಡಿ. ಅದು ನಮ್ಮನ್ನು ಮುಂದಿನ ಸಾಲಿನಲ್ಲಿ ಕೂರುವಂತೆ ಮಾಡುತ್ತದೆ ಎನ್ನುತ್ತಾರೆ ನಿಗರ್. (ಈನಾಡು.ನೆಟ್)