ಹೈದರಾಬಾದ್ : ಪಿ ವಿ ಸಿಂಧು ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಕ್ರೀಡಾ ತಾರೆ ಎನಿಸಿಕೊಂಡಿದ್ದಾರೆ.
2020ರ ಒಲಿಂಪಿಕ್ಸ್ ಆರಂಭಕ್ಕೆ ಮುನ್ನ ಜುಲೈ 13ರಂದು ಭಾರತದ ಒಲಿಂಪಿಕ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದ ಮೋದಿ. ಕ್ರೀಟಾಪಟುಗಳ ಸಿದ್ಧತೆ ಬಗ್ಗೆ ಚರ್ಚಿಸಿದ್ದರು. ಕಳೆದ ರಿಯೋ ಒಲಿಂಪಿಕ್ಸ್ ವೇಳೆ ಫಿಟ್ನೆಸ್ ಕಾಪಾಡಿಕೊಳ್ಳುವ ಉದ್ದೇಶದಿಂದ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು ಸಿಂಧು ಅವರಿಂದ ಮೊಬೈಲ್ ದೂರವಿಟ್ಟಿದ್ದನ್ನು, ಐಸ್‌ಕ್ರೀಮ್ ತಿನ್ನದಂತೆ ತಡೆದಿದ್ದರ ಬಗ್ಗೆ ಮಾತನಾಡುತ್ತಾ, ನಿಮ್ಮ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಒಟ್ಟಿಗೆ ಐಸ್‌ಕ್ರೀಮ್ ತಿನ್ನೋಣ ಎಂದು ಮೋದಿ ಹೇಳಿದ್ದರು.
ಇನ್ನು, ಪ್ರಧಾನಿಯವರ ಈ ಸ್ಫೂರ್ತಿಯ ಮಾತುಗಳ ಬಗ್ಗೆ ಪಿ ವಿ ಸಿಂಧು ಅವರ ತಂದೆ ಹಾಗೂ ತಾಯಿ ಸಂತಸಪಟ್ಟಿದ್ದು, ಇಂದು ಆ ವಿಷಯವನ್ನು ಕೂಡ ನೆನಪಿಸಿಕೊಂಡಿದ್ದಾರೆ. ಆಕೆಯ ಐತಿಹಾಸಿಕ ವಿಜಯದ ನಂತರ, ಪ್ರಧಾನಮಂತ್ರಿ ಆಕೆಯನ್ನು ಅಭಿನಂದಿಸಿದ್ದಾರೆ. ಪಿ ವಿ ಸಿಂಧು ಅವರ ಅದ್ಭುತ ಪ್ರದರ್ಶನದಿಂದ ನಾವೆಲ್ಲರೂ ಹರ್ಷಗೊಂಡಿದ್ದೇವೆ. ಟೋಕಿಯೊದಲ್ಲಿ ಕಂಚು ಗೆದ್ದಿದ್ದಕ್ಕಾಗಿ ಅಭಿನಂದನೆಗಳು ಎಂದು ಶುಭ ಹಾರೈಸಿದ್ದಾರೆ.