ನವದೆಹಲಿ : ಭಾರತ ಕಂಡ ಕೆಚ್ಚೆದೆಯ ವೀರ 'ಕಾಣೆ'ಯಾಗಿ ಸುಮಾರು 77 ವರ್ಷಗಳಾದರೂ, ಅವರು ಇಂದಿಗೂ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರೇ ನಮ್ಮ ನೇತಾಜಿ ಸುಭಾಷ್ ಚಂದ್ರ ಬೋಸ್. ಅವರ ತ್ಯಾಗ ಮತ್ತು ಶೌರ್ಯ ಎಲ್ಲರಿಗೂ ಚಿರಕಾಲ ಉಳಿಯುತ್ತದೆ.
ಸ್ವಾತಂತ್ರ ಹೋರಾಟಗಾರರ ವಿಚಾರದಲ್ಲಿ ನಾವು ಸುಭಾಷ್ ಚಂದ್ರ ಬೋಸ್ ಅವರ ತ್ಯಾಗಕ್ಕೆ ಅಷ್ಟೇನೂ ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ಇತಿಹಾಸದ ಕೆಲವೊಂದು ವಿಚಾರಗಳನ್ನು ಮುಚ್ಚಿಟ್ಟು, ಕೆಲವರನ್ನು ಮಾತ್ರ ಸ್ವಾತಂತ್ರ ಯೋಧರೆಂದು ಬಿಂಬಿಸಲಾಗಿದೆ. ಇದು ನಮ್ಮ ಇತಿಹಾಸದಲ್ಲಿನ ದೋಷ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ.
ಈ ಇತಿಹಾಸ ದೋಷವನ್ನು ಈಗ ಸ್ವಲ್ಪಮಟ್ಟಿಗಾದರೂ ಸರಿಪಡಿಸಲಾಗುತ್ತಿದೆ. ನೇತಾಜಿಗೆ ಈ ಹಿಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ರ ಪ್ರತಿಮೆಯನ್ನು ಗ್ರಾನೈಟ್‌ನಲ್ಲಿ ನಿರ್ಮಿಸಲಾಗುತ್ತಿದೆ.
ಗ್ರಾನೈಟ್ ಪ್ರತಿಮೆ ಅನಾವರಣಗೊಳ್ಳುವವರೆಗೆ ಆ ಜಾಗದಲ್ಲಿ 28 ಅಡಿ ಎತ್ತರದ ಮತ್ತು 6 ಅಡಿ ಅಗಲದ ಹಾಲೋಗ್ರಾಮ್ ಪ್ರತಿಮೆ ಆ ಸ್ಥಳದಲ್ಲಿ ಅನಾವರಣಗೊಳಿಸಲಾಗುತ್ತದೆ. ನೇತಾಜಿ ಸುಭಾಷ್ ಚಂದ್ರ ಬೋಸ್ರ 125ನೇ ಜನ್ಮ ವಾರ್ಷಿಕೋತ್ಸವವಾದ ಜನವರಿ 23ರಂದು ಆ ಪ್ರತಿಮೆಯ ಉದ್ಘಾಟನೆ ನಡೆಯಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಗ್ರಾನೈಟ್‌ನಿಂದ ಮಾಡಿದ ನೇತಾಜಿ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂಬ ವಿಚಾರವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಈ ಪ್ರತಿಮೆ ಭಾರತ ಸುಭಾಷ್ ಚಂದ್ರ ಬೋಸ್ ಅವರಿಗೆ ಋಣಿಯಾಗಿರುವುದರ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಜನ ಜಾಗದಲ್ಲಿ ನೇತಾಜಿ : ಈಗ ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಈ ಆರಂಭದಲ್ಲಿ ಇಂಗ್ಲೆಂಡ್‌ನ ಮಾಜಿ ರಾಜ ಐದನೇ ಜಾರ್ಜ್ 70 ಅಡಿ ಎತ್ತರದ ಪ್ರತಿಮೆ ಇತ್ತು. 1968ರಲ್ಲಿ ಆ ಪ್ರತಿಮೆಯನ್ನು ತೆರವು ಮಾಡಲಾಗಿತ್ತು. ಈಗ ಅದೇ ಜಾಗದಲ್ಲಿ ನೇತಾಜಿಯವರ ಗ್ರಾನೈಟ್ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ. ಹಾಲೋಗ್ರಾಮ್ ಪ್ರತಿಮೆಯ ಮೂಲಕ ಭಾರತ ನೇತಾಜಿಯವರನ್ನು ನೆನಪಿಸಿಕೊಳ್ಳುತ್ತಿದ್ದು, ಈ ಮೂಲಕ ಇತಿಹಾಸದ ದೋಷವನ್ನು ಸರಿಪಡಿಸಲಾಗುತ್ತಿದೆ.
ಮತ್ತೊಂದೆಡೆ ಮೊದಲ ಮಹಾಯುದ್ಧದಲ್ಲಿ ಹುತಾತ್ಮರಾದ ಬ್ರಿಟಿಷ್ ಇಂಡಿಯಾದ ಸೈನಿಕರ ನೆನಪಿಗಾಗಿ ಇಂಪೀರಿಯಲ್ ವಾರ್ ಗ್ರೇವ್ಸ್ ಕಮಿಷನ್ (IWGC) ಅಮರ್ ಜವಾನ್ ಸ್ಮಾರಕವನ್ನು ನಿರ್ಮಾಣ ಮಾಡಿತ್ತು. ಇದಾದ ನಂತರ 1971ರಲ್ಲಿ ಬಾಂಗ್ಲಾ ವಿಮೋಚನೆಯ ವೇಳೆ ಹುತಾತ್ಮರಾದ ಸೈನಿಕರ ಸ್ಮರಣೆಗಾಗಿ ಅಲ್ಲಿ ಅಮರ ಜವಾನ್ ಜ್ಯೋತಿಯನ್ನು ಹೊತ್ತಿಸಲಾಗಿತ್ತು. ಈಗ ಆ ಜ್ಯೋತಿಯನ್ನು 2019ರಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯಲ್ಲಿ ವಿಲೀನಗೊಳಿಸುವ ಮೂಲಕ ಇತಿಹಾಸ ಮತ್ತೊಂದು ದೋಷವನ್ನು ಸರಿಪಡಿಸಲಾಗಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು: ತಟಸ್ಥ ನೀತಿ ಅನುಸರಿಸಲಿದೆಯಾ ಭಾರತ?
ಬ್ರಿಟಿಷರ ಸಂಸ್ಕೃತಿಗೆ ಬ್ರೇಕ್ : 1971ರ ಮತ್ತು ಇತರ ಯುದ್ಧಗಳಲ್ಲಿ ಹುತಾತ್ಮರಾದವರಿಗೆ ಅಮರ್ ಜವಾನ್ ಜ್ಯೋತಿಯಲ್ಲಿನ ಜ್ವಾಲೆಯನ್ನು ಹೊತ್ತಿಸಲಾಗಿದೆ ಎಂಬುದು ತುಂಬಾ ವಿಚಿತ್ರ ಎಂದು ಪ್ರಧಾನಿ ಕಚೇರಿ ಮೂಲಗಳು ಹೇಳಿದ್ದು, ಇಂಡಿಯಾ ಗೇಟ್‌ನಲ್ಲಿ ಕೆತ್ತಲಾದ ಹೆಸರುಗಳು ಮೊದಲನೆಯ ಮಹಾಯುದ್ಧ ಮತ್ತು ಆಂಗ್ಲೋ-ಆಫ್ಘನ್ ಯುದ್ಧದಲ್ಲಿ ಬ್ರಿಟಿಷರಿಗಾಗಿ ಹೋರಾಡಿದ ಕೆಲವು ಸೈನಿಕರದ್ದಾಗಿದೆ.
ಅದು ವಸಾಹತುಶಾಹಿ ಗತಕಾಲದ ಸಂಕೇತವಾಗಿದೆ ಎಂದು ಪ್ರಧಾನಿ ಕಚೇರಿ ಮೂಲಗಳು ಹೇಳಿವೆ. ಈಗ ಆ ಜಾಗದಲ್ಲಿ ನೇತಾಜಿಯವರ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದ್ದು, ಈ ವಸಾಹತುಶಾಹಿ ಸಂಸ್ಕೃತಿಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಕೊಟ್ಟಂತಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ