ನವದೆಹಲಿ: ಭಾರತದಲ್ಲಿ ಪ್ರಸ್ತುತ ಒಂದು ವರ್ಷದವರೆಗೆ ಅಗತ್ಯವಿರುವ ಪ್ರಮಾಣಕ್ಕಿಂತಲೂ ಹೆಚ್ಚಿನ ಗೋಧಿ ದಾಸ್ತಾನಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದರು. ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಗೋಧಿ ರಫ್ತು ತಡೆಯಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ವರ್ಷದಲ್ಲಿ, ಏಪ್ರಿಲ್ 1, 2023ರಂದು ಕಲ್ಯಾಣ ಯೋಜನೆಗಳ ಅಗತ್ಯವನ್ನು ಪೂರೈಸಿದ ನಂತರ ಭಾರತವು 80 LMT ಗೋಧಿಯ ದಾಸ್ತಾನು ಹೊಂದಿರುತ್ತದೆ, ಇದು ಕನಿಷ್ಟ ಅವಶ್ಯಕತೆಯಾದ 75 LMT ಗಿಂತ ಹೆಚ್ಚಾಗಿರುತ್ತದೆ. ಉತ್ಪಾದನೆಯು 1,050ಕ್ಕೆ ನಿರೀಕ್ಷಿಸಲಾಗಿದ್ದರೂ ಸಹ ಭಾರತವು ಹೆಚ್ಚುವರಿ ಗೋಧಿ ಹೊಂದಿದೆ ಎಂದು ಅವರು ಹೇಳಿದರು.
ಇದುವರೆಗೆ 40 LMT ಗೋಧಿ ರಫ್ತು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಏಪ್ರಿಲ್ 2022 ರಲ್ಲಿ ಸುಮಾರು 11 LMT ರಫ್ತು ಮಾಡಲಾಗಿದೆ. ಈಜಿಪ್ಟ್ ಮತ್ತು ಟರ್ಕಿ ಕೂಡ ಭಾರತೀಯ ಗೋಧಿ ಆಮದು ಮಾಡಿಕೊಳ್ಳಲು ಅನುಮೋದನೆ ನೀಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಜೂನ್‌ನಿಂದ ಅರ್ಜೆಂಟಿನಾ ಮತ್ತು ಆಸ್ಟ್ರೇಲಿಯಾದಿಂದ ಗೋಧಿ ಬರಲು ಶುರುವಾಗುತ್ತದೆ. ಆದ್ದರಿಂದ ರಫ್ತುದಾರರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಗೋಧಿ ಮಾರಾಟ ಮಾಡಲು ಇದು ಸಕಾಲ ಎಂದರು.
ದೇಶದಲ್ಲಿ ಖಾದ್ಯ ತೈಲ ದಾಸ್ತಾನು ಕೂಡ ಸಾಕಷ್ಟಿದೆ. ಇಂಡೋನೇಷ್ಯಾದ ತಾತ್ಕಾಲಿಕ ನಿಷೇಧದ ನಂತರ, ತಾಳೆ ಎಣ್ಣೆ ಆಮದು ಶೀಘ್ರದಲ್ಲೇ ಮತ್ತೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಸ್ಪಷ್ಟಪಡಿಸಿದರು.
ಗೋಧಿ ಸಂಗ್ರಹಣೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿಂದಾಗಿ ಹೆಚ್ಚಿನ ಪ್ರಮಾಣದ ಗೋಧಿಯನ್ನು ಎಂ.ಎಸ್.ಪಿ.(ಕನಿಷ್ಠ ಬೆಂಬಲ ಬೆಲೆ)ಗಿಂತ ಹೆಚ್ಚಿನ ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ, ಇದರಿಂದ ರೈತರಿಗೆ ಉತ್ತಮ ದರ ಸಿಗುತ್ತಿದೆ ಎಂದರು.
ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆ ಅಕ್ರಮ: ಕಾಂಗ್ರೆಸ್ ಹಿಟ್ ಆ್ಯಂಡ್ ರನ್ ಮಾಡ್ತಿದೆ ಎಂದ ಸಿಎಂ