ನವದೆಹಲಿ: ವಾಟ್ಸ್ಆ್ಯಪ್ ತನ್ನ ಮೂಲ ಕಂಪನಿ ಫೇಸ್‌ಬುಕ್‌ನೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುತ್ತಿರುವ ಬಗ್ಗೆ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆ ಗೌಪ್ಯತೆ ನೀತಿ ಮತ್ತು ಬಳಕೆಯ ನವೀಕರಣಕ್ಕೆ ಸಂಬಂಧಿಸಿ, ಬಳಕೆದಾರರಿಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ವಾಟ್ಸ್ಆ್ಯಪ್ ಬ್ಯಾನರ್ ಪ್ರದರ್ಶಿಸಲಿದೆ.
ವಿವಾದಾತ್ಮಕ ನೀತಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಯನ್ನು ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದ್ದು, ಬದಲಾವಣೆಯ ದಿನಾಂಕವನ್ನು ಫೆಬ್ರವರಿ 8 ರಿಂದ ಮೇ 15 ಕ್ಕೆ ಮುಂದೂಡಿದೆ.
ಶುಕ್ರವಾರ ಬ್ಲಾಗ್‌ಪೋಸ್ಟ್‌ನಲ್ಲಿ, ಮುಂದಿನ ದಿನಗಳಲ್ಲಿ ಅಪ್ಲಿಕೇಶನ್‌ನಲ್ಲಿ ಬ್ಯಾನರ್ ಪ್ರದರ್ಶಿಸಲಾಗುವುದು. ಜನರು ತಮಗೆ ಬೇಕಾದ ಮಾಹಿತಿಯನ್ನು ಇಲ್ಲಿ ಓದಬಹುದಾಗಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ.
ಓದಿ:ಫೆ.8ರಿಂದ ವಾಟ್ಸ್ಆ್ಯಪ್ನಲ್ಲಿ ಪರಿಷ್ಕೃತ ಗೌಪ್ಯ ನೀತಿ: ಈ ನಿಯಮ ಒಪ್ಪಿದರಷ್ಟೇ ಸೇವೆ ಮುಂದುವರಿಕೆ
"ನಿಮ್ಮ ಕಾಳಜಿಗಾಗಿ ನಾವು ಹೆಚ್ಚಿನ ಮಾಹಿತಿಯನ್ನು ಸೇರಿಸಿದ್ದೇವೆ. ಅಂತಿಮವಾಗಿ, ಬಳಕೆದಾರರು ವಾಟ್ಸ್ಆ್ಯಪ್ನನ್ನು ಬಳಸುವುದನ್ನು ಮುಂದುವರಿಸಲಿ ಎಂದು ನಾವು ಈ ಬದಲಾವಣೆಯನ್ನು ಮಾಡುತ್ತಿದ್ದೇವೆ " ಎಂದು ಫೇಸ್ಬುಕ್ ಒಡೆತನದ ಕಂಪನಿ ಹೇಳಿಕೊಂಡಿದೆ.
ಫೆಬ್ರವರಿ 8ರ ಒಳಗೆ ವಾಟ್ಸ್ಆ್ಯಪ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳನ್ನು ಒಪ್ಪಿಕೊಳ್ಳುವಂತೆ ಕಂಪನಿ ಸೂಚಿಸಿತ್ತು. ಒಂದು ವೇಳೆ ಒಪ್ಪಿಗೆ ಸೂಚಿಸದಿದ್ದರೇ ಖಾತೆಗಳು ಅಳಿಸಲಾಗುತ್ತದೆ ಎಂದು ಕೂಡ ಹೇಳಿತ್ತು. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ನಂತರ, ವಾಟ್ಸ್ಆ್ಯಪ್ ತನ್ನ ಹೊಸ ನೀತಿ ನವೀಕರಣವನ್ನು ಮೇ.15 ಕ್ಕೆ ಮುಂದೂಡಿತ್ತು.