ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಅತ್ಯಾಚಾರದ ಬೆದರಿಕೆಗಳನ್ನು ಎದುರಿಸುತ್ತಿದ್ದು, ಪೋಷಕರು ತಮ್ಮ ಹೆಣ್ಣುಮಕ್ಕಳು ರಾಜ್ಯವನ್ನು ತೊರೆಯಬೇಕೆಂದು ಬಯಸುತ್ತಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ತಿಳಿಸಿದೆ.
ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾಹಿತಿ ಪಡೆಯಲು ರಾಷ್ಟ್ರೀಯ ಮಹಿಳಾ ಆಯೋಗದ ತಂಡ ರಾಜ್ಯಕ್ಕೆ ಭೇಟಿ ನೀಡಿದೆ. ಈ ವೇಳೆ ಬಂಗಾಳದ ಮಹಿಳೆಯರು, ಹೆಣ್ಣುಮಕ್ಕಳು ತಮಗೆ ಅತ್ಯಾಚಾರದ ಬೆದರಿಕೆಗಳಿರುವುದಾಗಿ, ಲೈಂಗಿಕ ಕಿರುಕುಳ-ಹಲ್ಲೆಗೆ ಒಳಗಾಗುತ್ತಿರುವುದಾಗಿ ಹಾಗೂ ಜೀವ ಭಯದಿಂದ ಇದರ ವಿರುದ್ಧ ದೂರುಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ರಕ್ಷಣೆಗೆ ಪೊಲೀಸರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ತಮ್ಮ ಹೆಣ್ಣುಮಕ್ಕಳು ಈ ರಾಜ್ಯವನ್ನ ಬಿಟ್ಟು ಹೋಗುವುದೇ ಒಳಿತು ಎಂದು ಇತ್ತ ಪೋಷಕರು ಅಳಲು ತೋಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಚುನಾವಣೋತ್ತರ ಹಿಂಸೆ: ವರದಿ ಕೇಳಿ ದೀದಿ ಸರ್ಕಾರಕ್ಕೆ ಕೇಂದ್ರದ ಎಚ್ಚರಿಕೆ
ಮೇ 2ರಂದು ಚುನಾವಣಾ ಫಲಿತಾಂಶ ಬಂದ 24 ಗಂಟೆಗಳಲ್ಲಿ ಆರು ಮಂದಿ ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಅನೇಕ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಕ್ಷದ ಅನೇಕ ಕಾರ್ಯಕರ್ತರ ಮನೆ ಮತ್ತು ಅಂಗಡಿಗಳು ಧ್ವಂಸವಾಗಿವೆ. ಇದು ಟಿಎಂಸಿ ಗೂಂಡಾಗಳ ಕೃತ್ಯ. ತೃಣಮೂಲ ಕಾಂಗ್ರೆಸ್ ತನ್ನ ಗೆಲುವನ್ನು ಹಿಂಸೆ ಮತ್ತು ರಕ್ತದಿಂದ ಆಚರಿಸಲು ಟಿಎಂಸಿ ಪ್ರಾರಂಭಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಇತ್ತ ತನ್ನ ಮೂವರು ಕಾರ್ಯಕರ್ತರ ಹತ್ಯೆ ಕೂಡ ಆಗಿದೆ ಎಂದು ಟಿಎಂಸಿ ಹೇಳಿಕೊಂಡಿದ್ದು, ಕೃತ್ಯದ ಆರೋಪವನ್ನು ಬಿಜೆಪಿ ಮೇಲೆ ಹೊರಿಸಿದೆ.
ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲು ಕೇಂದ್ರ ಗೃಹ ಸಚಿವಾಲಯವು ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸೂಚಿಸಿದೆ.