ಮಾತಾಭಂಗ(ಪಶ್ಚಿಮ ಬಂಗಾಳ): 4ನೇ ಹಂತದ ಮತದಾನದ ವೇಳೆ ಕೂಚ್ ಬಿಹಾರ್ದಲ್ಲಿ ನಡೆದ ಹಿಂಸೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ(ಸಿಐಎಸ್ಎಫ್) ನಡೆಸಿದ ಗುಂಡಿನ ದಾಳಿ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ ಎಂದಿದ್ದಾರೆ.
ಘಟನೆ ವೇಳೆ, ನಾಲ್ವರ ಹತ್ಯೆಗೆ ಕಾರಣವಾಗಿರುವ ಆರೋಪಿಗಳ ಪತ್ತೆ ಹಚ್ಚಿ, ಕಾನೂನಿನ ಪ್ರಕಾರ ಶಿಕ್ಷೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಘಟನೆ ನಡೆದ 72 ಗಂಟೆಯೊಳಗೆ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ದೀದಿ, ರಾಜಕೀಯ ಮುಖಂಡರಿಗೆ ನಿಷೇಧ ಹೇರಿದ್ದರಿಂದ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಏಪ್ರಿಲ್ 10ರಂದು ನಡೆದಿದ್ದ 4ನೇ ಹಂತದ ಮತದಾನದ ವೇಳೆ ಘರ್ಷಣೆ ಉಂಟಾಗಿದ್ದರಿಂದ ಆತ್ಮರಕ್ಷಣೆಗೋಸ್ಕರ ಸಿಐಎಸ್ಎಫ್ ಪಡೆ ಗುಂಡಿನ ದಾಳಿ ನಡೆಸಿದ್ದರಿಂದ ನಾಲ್ವರು ಸಾವನ್ನಪ್ಪಿದ್ದರು. ಇದೇ ವಿಚಾರವಾಗಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಕೂಚ್ ಬಿಹಾರ್ ಫೈರಿಂಗ್ ಪ್ರಕರಣ: ಸಿಐಎಸ್ಎಫ್ ಸಿಬ್ಬಂದಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ
ಕೂಚ್ ಬಿಹಾರ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿ ಸಂಬಂಧ ಸಿಐಎಸ್ಎಫ್ ಸಿಬ್ಬಂದಿಯನ್ನ ಭಾರತದ ಚುನಾವಣಾ ಆಯೋಗ (ಇಸಿಐ) ಈಗಾಗಲೇ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.'ಮತದಾರರ ಪ್ರಾಣ ಉಳಿಸಲು' ಹಾಗೂ 'ಆತ್ಮರಕ್ಷಣೆ'ಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಸಿಬ್ಬಂದಿಗೆ ಗುಂಡು ಹಾರಿಸುವುದು ಅನಿವಾರ್ಯವಾಗಿತ್ತು ಎಂದು ಹೇಳಿ ಚುನಾವಣಾ ಆಯೋಗ ಸಿಐಎಸ್ಎಫ್ಗೆ ಕ್ಲೀನ್ ಚಿಟ್ ನೀಡಿದೆ.