ಜಲಪೈಗುರಿ (ಪಶ್ಚಿಮ ಬಂಗಾಳ) : ಆಸ್ಪತ್ರೆಗಳೂ ಭ್ರಷ್ಟಾಚಾರ, ವಂಚನೆಯ ಕೂಪವಾಗಿವೆ. ಒಂದು ವರ್ಷದ ಹಿಂದೆಯೇ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಈಗಲೂ ಡಯಾಲಿಸಿಸ್ ಮಾಡಿದ ಬಿಲ್ ಪಾವತಿಯಾಗುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಪಶ್ಚಿಮಬಂಗಾಳದ ಜಲಪೈಗುರಿ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ಈ ವಂಚನೆಯ ಘಟನೆ ನಡೆದಿದೆ. ಸುಮಾರು 1 ವರ್ಷದಿಂದ ಮೃತ ರೋಗಿಯ ಹೆಸರಿನಲ್ಲಿ ಡಯಾಲಿಸಿಸ್‌ಗಾಗಿ ನಕಲಿ ಬಿಲ್‌ಗಳನ್ನು ಸಲ್ಲಿಸಿ ಹಣವನ್ನು ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಈಟಿವಿ ಭಾರತ್ ನಡೆಸಿದ ಕಾರ್ಯಾಚರಣೆಯಲ್ಲಿ ಈ ವಂಚನೆ ಪ್ರಕರಣ ಬಯಲಾಗಿದೆ.
ಘಟನೆಯೇನು? : ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಬಹದ್ದೂರ್ ಬಿಸ್ವಕರ್ಮ ಎಂಬುವರು ಮೂತ್ರಪಿಂಡ ಕಾಯಿಲೆಗೆ ಒಳಗಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. 1 ವರ್ಷದ ಹಿಂದೆಯೇ ಕಾಯಿಲೆ ಗುಣಮುಖವಾಗದೇ 2021ರ ಜೂನ್ 23ರಂದು ಮೃತಪಟ್ಟಿದ್ದರು. ರೋಗಿ ಮೃತಪಟ್ಟು ವರ್ಷವಾದರೂ ಆತನ ಹೆಸರಿನಲ್ಲೇ ಆಸ್ಪತ್ರೆಯವರು ಡಯಾಲಿಸಿಸ್ ಮಾಡುತ್ತಿರುವ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಪಡೆದುಕೊಳ್ಳುತ್ತಿದ್ದರು. ಮಾಹಿತಿ ತಿಳಿದು, ಈ ಬಗ್ಗೆ ಈಟಿವಿ ಭಾರತ್ ಸುದ್ದಿ ಪ್ರಸಾರ ಮಾಡಿತ್ತು.
ತನಿಖೆಯಲ್ಲಿ ಬಹಿರಂಗ : ಇನ್ನು ಸುದ್ದಿ ಪ್ರಸಾರವಾದ ಬಳಿಕ ತನಿಖೆಗೆ ಮುಂದಾದ ಆರೋಗ್ಯ ಇಲಾಖೆ ಅಧಿಕಾರಿ ಚಂದನ್ ಘೋಷ್ ಎಂಬುವರು ರೋಗಿಯ ರೂಪದಲ್ಲಿ ಚಿಕಿತ್ಸೆಗಾಗಿ ತೆರಳಿ ಈ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ವಂಚನೆಯನ್ನು ಬಯಲಿಗೆಳೆದಿದ್ದಕ್ಕೆ ಈಟಿವಿ ಭಾರತ್ಗೆ ಧನ್ಯವಾದ ತಿಳಿಸಿದ್ದಾರೆ.
ವಿಷಯ ಗಮನಕ್ಕೆ ಬಂದ ತಕ್ಷಣ ಡಯಾಲಿಸಿಸ್ ಘಟಕದಲ್ಲಿ ದಾಳಿ ನಡೆಸಲಾಯಿತು. ನರ್ಸಿಂಗ್ ಸೂಪರಿಂಟೆಂಡೆಂಟ್ ಮತ್ತು ಆಸ್ಪತ್ರೆಯ ಅಧೀಕ್ಷಕರನ್ನು ಡಯಾಲಿಸಿಸ್ ಘಟಕಕ್ಕೆ ತನಿಖೆಗಾಗಿ ಕಳುಹಿಸಲಾಗಿದೆ. ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಡಯಾಲಿಸಿಸ್ ಘಟಕವನ್ನು ಬ್ಯಾರಕ್‌ಪೋರ್ ಮೆಡಿಕೇರ್ ಆ್ಯಂಡ್ ರಿಕವರಿ ಸೆಂಟರ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆ ನಡೆಸುತ್ತಿದೆ. ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ನೀಡಿದ ನಂತರ ಬಿಲ್‌ಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತಿತ್ತು.
ಓದಿ: ಮಗು ಆಯ್ತು ಅಂತ ನೀವೇನಾದರೂ ಗರ್ಭಕೋಶ ಆಪರೇಷನ್ ಮಾಡಿಸಿದ್ದೀರಾ? ಹಾಗಾದರೆ ಪರಿಣಾಮದ ಬಗ್ಗೆ ಜಾಗ್ರತೆ ಇರಲಿ..