ನವದೆಹಲಿ: ಗುರುನಾಯ್ಡು ಸನಪತಿ ಮೆಕ್ಸಿಕೋದ ಲಿಯಾನ್‌ನಲ್ಲಿ ನಡೆಯುತ್ತಿರುವ ಐಡಬ್ಲ್ಯುಎಫ್ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ವೈಟ್ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾನುವಾರ ತಡರಾತ್ರಿ ನಡೆದ 55 ಕೆಜಿ ಯುವಕರ ವಿಭಾಗದ ಸ್ಪರ್ಧೆಯಲ್ಲಿ 16 ವರ್ಷದ ವೈಟ್ಲಿಫ್ಟರ್ ಒಟ್ಟು 230 ಕೆಜಿ ಭಾರ (104 ಕೆಜಿ+126 ಕೆಜಿ) ಎತ್ತುವ ಮೂಲಕ ವಿಶೇಷ ಸಾಧನೆ ತೋರಿದರು.
ಸನಪತಿ ಅವರಲ್ಲದೆ, 45 ಕೆಜಿ ಯುವತಿಯರ ವಿಭಾಗದಲ್ಲಿ ಸೌಮ್ಯ ಎಸ್.ದಳವಿ ಎರಡನೇ ದಿನದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಎರಡು ಬಾರಿ ಖೇಲೋ ಇಂಡಿಯಾ ಯೂತ್ ಚಿನ್ನದ ಪದಕ ಗೆದ್ದಿರುವ ಮಹಾರಾಷ್ಟ್ರದ ದಳವಿ, 148 ಕೆಜಿ (65 ಕೆಜಿ + 83 ಕೆಜಿ) ತೂಕ ಎತ್ತಿ ಫಿಲಿಪೈನ್ಸ್‌ನ ರೋಸ್ ಜೆ ರಾಮೋಸ್ 155 ಕೆಜಿ (70 ಕೆಜಿ + 85 ಕೆಜಿ) ಮತ್ತು ವೆನೆಜುವೆಲಾ ಕೆರ್ಲಿಸ್ ಎಂ. ಮೊಂತಿಲಾ 153 ಕೆ.ಜಿ. (71 ಕೆಜಿ + 82 ಕೆಜಿ) ನಂತರ ಮೂರನೇ ಸ್ಥಾನ ಪಡೆದರು.
ಸ್ಪರ್ಧೆಯಲ್ಲಿದ್ದ ಇತರ ಭಾರತೀಯರಾದ, ಆರ್.ಭವಾನಿ 132 ಕೆಜಿ (57 ಕೆಜಿ + 75 ಕೆಜಿ) ಭಾರ ಎತ್ತಿ ಅತ್ಯುತ್ತಮ ಪ್ರಯತ್ನದೊಂದಿಗೆ ಎಂಟನೇ ಸ್ಥಾನ ಪಡೆದಿದ್ದಾರೆ ಇದೀಗ ಜಾಗತಿಕ ಸ್ಪರ್ಧೆಯಲ್ಲಿ ಭಾರತ ನಾಲ್ಕು ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಪರ್ಧೆಯ ಆರಂಭಿಕ ದಿನದಂದು ಆಕಾಂಕ್ಷಾ ಕಿಶೋರ ವ್ಯಾವಹರೆ ಮತ್ತು ವಿಜಯ್ ಪ್ರಜಾಪತಿ ಬೆಳ್ಳಿ ಪದಕ ಸಾಧನೆ ಮಾಡಿದ್ದರು. ಕಳೆದ ವರ್ಷ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯ ಟೂರ್ನಿಯಲ್ಲಿ ಭಾರತ ಭಾಗವಹಿಸಿರಲಿಲ್ಲ.
ಇದನ್ನೂ ಓದಿ : ನಾರ್ವೆ ಚೆಸ್ ಚಾಂಪಿಯನ್ಶಿಪ್: ಜೂ. ಚೆಸ್ ಮಾಸ್ಟರ್ ಆರ್ ಪ್ರಗ್ನಾನಂದಗೆ ಪ್ರಶಸ್ತಿ