ಭಾಗಲ್ಪುರ್ (ಬಿಹಾರ): ಬಿಹಾರದ ಭಾಗಲ್ಪುರದ ಮಹಿಳಾ ಕಾಲೇಜೊಂದರಲ್ಲಿ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದ್ದು, ಇಲ್ಲಿ ವಿದ್ಯಾರ್ಥಿನಿಯರಿಗೆ ಕೂದಲು ಬಿಟ್ಟುಕೊಂಡು ಬರಲು ಹಾಗೂ ಸೆಲ್ಫಿ ತೆಗೆಯಲು ನಿಷೇಧ ಹೇರಲಾಗಿದೆ.
ಸುಂದರ್ವತಿ ಮಹಿಳಾ ಮಹಾವಿದ್ಯಾಲಯ, ಇದು ಭಾಗಲ್ಪುರದ ಏಕೈಕ ಮಹಿಳಾ ಕಾಲೇಜಾಗಿದ್ದು, ಇಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ನೀಡಲಾಗುತ್ತದೆ. ಪದವಿ ಪೂರ್ವ ಕೋರ್ಸ್ನ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಸುಮಾರು 1500 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. 11 ಮತ್ತು 12ನೇ ತರಗತಿ ವಿದ್ಯಾರ್ಥಿನಿಯರಿಗೆ ಈ ವರ್ಷದಿಂದ ಹೊಸ ಡ್ರೆಸ್ ಕೋಡ್ ಜಾರಿಗೆ ತರಲು ಕಾಲೇಜು ಸಮಿತಿ ನಿರ್ಧರಿಸಿದ್ದು, ಇದಕ್ಕೆ ಪ್ರಾಂಶುಪಾಲರಾದ ಪ್ರೊ. ರಮಣ್ ಸಿನ್ಹಾ ಕೂಡ ಅನುಮತಿ ನೀಡಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲೂ ಕಾಂತಿಯುತ ತ್ವಚೆ ಕಾಪಾಡಿಕೊಳ್ಳಬೇಕೇ?.. ಹೀಗೆ ಮಾಡಿ..!
ಹೊಸ ನಿಯಮಗಳ ಪ್ರಕಾರ ವಿದ್ಯಾರ್ಥಿನಿಯರು ತೆರೆದ ಕೂದಲೊಂದಿಗೆ ಬಂದರೆ ಅವರಿಗೆ ಕಾಲೇಜಿನೊಳಗೆ ಪ್ರವೇಶ ನೀಡಲಾಗುವುದಿಲ್ಲ. ಜುಟ್ಟು ಅಥವಾ ಜಡೆ ಕಟ್ಟಿಕೊಂಡು ನೀಲಿ ಕುರ್ತಿ, ಬಿಳಿ ಸಲ್ವಾರ್, ಬಿಳಿ ದುಪಟ್ಟಾ, ಕಪ್ಪು ಶೂ ಧರಿಸಿ ಹುಡುಗಿಯರು ಕಾಲೇಜಿಗೆ ಬರಬೇಕು. ಚಳಿಗಾಲದಲ್ಲಿ ರಾಯಲ್ ಬ್ಲೂ ಬ್ಲೇಜರ್ ಅಥವಾ ಕಾರ್ಡಿಜನ್ ಧರಿಸಿ ಬರಬೇಕು. ಅಷ್ಟೇ ಅಲ್ಲ, ಕಾಲೇಜು ಆವರಣದಲ್ಲಿ ಸೆಲ್ಫಿಯಂತೂ ಕ್ಲಿಕ್ಕಿಸುವ ಹಾಗಿಲ್ಲ ಎಂದು ಸಮಿತಿ ಸ್ಪಷ್ಟವಾಗಿ ತಿಳಿಸಿದೆ.